ಸೇವಾ ಭದ್ರತೆ ವಿಚಾರ ಸಂಪುಟ ಸಮಿತಿಗೆ ತನ್ನಿ

439

ಶಿವಮೊಗ್ಗ: ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ನೀಡುವ ವಿಚಾರ ಕೂಡಲೇ ಸಂಪುಟ ಸಮಿತಿಗೆ ತರಲು ಸಿಎಂ ಹಾಗೂ ವಿಧಾನಪರಿಷತ್ ಸದಸ್ಯರು ಕ್ರಮ ಕೈಗೊಳ್ಳಲು ಸರ್ಕಾರಿ ಪಪೂ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಒತ್ತಾಯಿಸಿದೆ.
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕೊಡುವ ವಿಚಾರ ಸದನದಲ್ಲಿ ಸ್ಪಷ್ಟ ನಿರ್ಧಾರ ಪ್ರಕಟವಾಗದೇ ನಿರಾಶೆಯಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಾ| ಹೆಚ್. ಸೋಮಶೇಖರ ಶಿಮೊಗ್ಗಿ ಇಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಉದ್ಯೋಗ ಭದ್ರತೆ ಮತ್ತು ಲಾಕ್ ಡೌನ್ ಅವಧಿ ವೇತನ ನೀಡುವಂತೆ ಕಳೆದ ೧೧ ವಾರಗಳಿಂದ ರಾಜ್ಯಾದ್ಯಂತ ಮುಷ್ಕರ ನಡೆಸಲಾಗುತ್ತಿತ್ತು. ಈ ಬಾರಿಯ ಅಧಿವೇಶನದಲ್ಲಿ ಸೇವಾ ಭದ್ರತೆ ವಿಚಾರ ಚರ್ಚೆಯಾಗದೇ ಕೇವಲ ಬಾಕಿ ವೇತನ ಕೊಡಿಸುವುದಕ್ಕೆ ವಿಧಾನಪರಿಷತ್ ಸದಸ್ಯರು ಚರ್ಚೆ ಯನ್ನು ಸೀಮಿತ ಗೊಳಿಸಿರುವುದು ದುರಾದೃಷ್ಟಕರ ಸಂಗತಿ ಎಂದರು.
ಬಹುನಿರೀಕ್ಷೆ ಇಟ್ಟು ಪರಿಷತ್ ಚುನಾವಣೆಯಲ್ಲಿ ನಾವು ಪರಿಷತ್ ಸದಸ್ಯರಿಗೆ ಮತ ನೀಡಿದ ನಮಗೆ ನಿರಾಶೆಯಾಗಿದೆ. ಮತ್ತೊಮ್ಮೆ ಪರಿಷತ್ ಸದಸ್ಯರು ಅತಿಥಿ ಉಪನ್ಯಾಸಕರ ಹಿತ ಕಾಪಾಡುವಲ್ಲಿ ಹಿಂದೆ ಸರಿದಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದರು.
ಕೋವಿಡ್-೧೯ ಕಾರಣಕ್ಕೆ ಈ ಬಾರಿ ಕಾಲೇಜುಗಳಲ್ಲಿ ದಾಖಲಾತಿ ಇಳಿಮುಖವಾಗಿದೆ. ತರಗತಿ ಆರಂಭ ಅಸ್ಪಷ್ಟವಾಗಿದೆ. ಆನ್‌ಲೈನ್ ತರಗತಿ ವಿವಿಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ಸೇವೆಯನ್ನು ೨೦೨೦ -೨೧ನೇ ಸಾಲಿಗೆ ನೇಮಿಸಿಕೊಂಡಿಲ್ಲ. ಈ ವಿಚಾರವಾಗಿ ಕೂಡಲೇ ಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರು ಮಧ್ಯ ಪ್ರವೇಶಿಸಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಲಾಕ್‌ಡೌನ್ ಅವಧಿ ವೇತನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಗಳು ಆರ್ಥಿಕ ಇಲಾಖೆಗೆ ಸೂಚನೆ ನೀಡಿರುವುದಕ್ಕೆ ಸಮಿತಿ ಅಭಿನಂದಿಸು ತ್ತದೆ. ಹಾಗೆಯೇ ವಿಧಾನಪರಿಷತ್ ಸಭೆಯಲ್ಲಿ ಗಮನಸೆಳೆದ ಪರಿಷತ್‌ನ ಎಲ್ಲ ಸದಸ್ಯರಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದನ್ನು ಸ್ವಾಗತಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂ.ಸಿ. ನರಹರಿ, ಡಿಎಸ್‌ಎಸ್ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಹೆಚ್.ಟಿ. ಹಾಲೇಶಪ್ಪ, ಎಂ.ಆರ್.ಶಿವಕುಮಾರ್ ಅಸ್ತಿ ಉಪಸ್ಥಿತರಿದ್ದರು.