ಕೋವಿಡ್-೧೯ ಸೋಂಕು ಹರಡುವಿಕೆಯ ಮುಂಜಾಗ್ರತಾ ಕ್ರಮ ವಹಿಸಲು ತಂಡಗಳ ರಚನೆ

548

ದಾವಣಗೆರೆ :

ದಾವಣಗೆರೆ ಜಿಲ್ಲೆ ಹಾಗೂ ದಾವಣಗೆರೆ ತಾಲ್ಲೂಕು, ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಕೋವಿಡ್-೧೯ನ ವೈರಾಣುಗಳಿಂದ ಹರಡುವ ಅಪಾಯಕಾರಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಂಡಗಳನ್ನು ರಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ.

ಟ್ರ್ಯಾಕಿಂಗ್ ಮತ್ತು ಎನ್‌ಫೋರ್ಸ್‌ಮೆಂಟ್ ತಂಡ: ಆಯಾ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕು ಆರಕ್ಷಕ ವೃತ್ತ ನಿರೀಕ್ಷಕರು, ಮೇಲಿನ ಇಲಾಖೆಗಳ ಅಧೀನ ಸಿಬ್ಬಂದಿಗಳು ಈ ತಂಡದ ಸದಸ್ಯರಾಗಿರುತ್ತಾರೆ. ಶಂಕಿತ ವ್ಯಕ್ತಿಯ ಹಿನ್ನಲೆಯ ಬಗ್ಗೆ ಗುರುತಿಸುವುದು. ಶಂಕಿತ ವ್ಯಕ್ತಿಯ ಕುಟುಂಬದ ಸದಸ್ಯರು ಮತ್ತು ಅವರ ವಾಸಸ್ಥಳ ಗುರುತಿಸುವುದು. ಕೊರೊನಾ ಶಂಕಿತರ ವಿವರಗಳು ಹಾಗೂ ಅವರು ಸಂಪರ್ಕಿಸಿದ ವ್ಯಕ್ತಿಗಳ ಮಾಹಿತಿಯನ್ನು ಪ್ರತಿ ದಿನ ವರದಿ ಸಲ್ಲಿಸುವುದು. ಮತ್ತು ನಿಷೇಧಿಸಿ ಹೊರಡಿಸಿರುವ ಆಜ್ಞೆಗಳನ್ನು ಪಾಲನೆಯಾಗುವಂತೆ ನೋಡಿಕೊಳ್ಳುವುದು.

ಪಬ್ಲಿಕ್ ಅವೇರ್‌ನೆಸ್ ಸ್ಯಾನಿಟೇಷನ್: ಆಯಾ ತಾಲ್ಲೂಕಿನ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕಿನ ಪುರಸಭೆ ಮುಖ್ಯಾಧಿಕಾರಿಗಳು, ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲಿನ ಇಲಾಖೆಗಳ ಅಧೀನ ಸಿಬ್ಬಂದಿಗಳು ಈ ತಂಡದ ಸದಸ್ಯರಾಗಿರುತ್ತಾರೆ. ಕೋವಿಡ್-೧೯ ಕುರಿತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಡಂಗೂರ ಮತ್ತು ಆಟೋ ರಿಕ್ಷಾಗಳ ಮೂಲಕ ವ್ಯಾಪಕ ಪ್ರಚಾರ ಮಾಡಿ, ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡುವುದು. ಪುರಸಭೆ/ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸ್ವಚ್ಚತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಘನ ತ್ಯಾಜ್ಯವನ್ನು ಸುರಕ್ಷಿತ ಸ್ಥಳಗಳಲ್ಲಿ ವಿಲೇಗೊಳಿಸುವ ಬಗ್ಗೆ ಕ್ರಮ ವಹಿಸುವುದು. ಲೈಸನ್ಸ್ ಹೊಂದದೇ ಇರುವ ಅನಧಿಕೃತ ಖಸಾಯಿಖಾನೆಗಳನ್ನು ಮುಚ್ಚುವ ಬಗ್ಗೆ ಖಚಿತಪಡಿಸಿಕೊಳ್ಳವುದು ಮತ್ತು ಈ ಬಗ್ಗೆ ಕ್ರಮ ವಹಿಸುವುದು.

ಐಸೊಲ್ಯೂಷನ್ ವಾರ್ಡ್ ಹಾಗೂ ಎಮರ್ಜೆನ್ಸಿ ಕೇರ್ ಮತ್ತು ಕ್ವಾರೆಂಟೈನ್‌ಗಳ ಮೇಲುಸ್ತುವಾರಿ ತಂಡ: ಆಯಾ ತಾಲ್ಲೂಕಿನ ಆರೋಗ್ಯಾಧಿಕಾರಿಗಳು, ತಾಲ್ಲೂಕಿನ ತಹಶೀಲ್ದಾರರು, ಮೇಲಿನ ಇಲಾಖೆಗಳ ಅಧೀನ ಸಿಬ್ಬಂದಿಗಳು ಈ ತಂಡದ ಸದಸ್ಯರಾಗಿರುತ್ತಾರೆ. ಹೊರಭಾಗದಿಂದ ಬಂದ ಶಂಕಿತ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸುವುದು ಅಂತಹ ವ್ಯಕ್ತಿಗಳಲ್ಲಿ ಕರೋನಾ ಲಕ್ಷಣಗಳು ಕಂಡು ಬಂದಲ್ಲಿ ಆ ವ್ಯಕ್ತಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುವುದು. ಹಾಗೂ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ ಪರಿಶೀಲಿಸುವುದು ಮತ್ತು ಕ್ರಮ ವಹಿಸುವುದು. ಆರೋಗ್ಯ ಸೌಲಭ್ಯಗಳ ಗುಣಮಟ್ಟದ ಬಗ್ಗೆ  ನಿಗಾ ವಹಿಸುವುದು. ಔಷಧಿ, ಸ್ಯಾನಿಟೈಸರ್, ಮುಖ ಕವಚ ಇತ್ಯಾದಿ ಅವಶ್ಯಕ ಸಾಮಗ್ರಿಗಳ ಸಂಗ್ರಹಣೆ ಇರುವಂತೆ ನೋಡಿಕೊಳ್ಳುವುದು.

ಮಿಡಿಯಾ ಔಟ್‌ರೀಚ್ ಮತ್ತು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾಸ್ಕ್ ಸ್ಯಾನಿಟೈಸರ್ ಇತರೆ ಸುರಕ್ಷಿತ ವಸ್ತುಗಳ ಮಾರಾಟ ಹಾಗೂ ನಕಲಿ ವಸ್ತುಗಳ ಮಾರಾಟ ನಿಯಂತ್ರಣ ತಂಡ: ಆಯಾ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕು ಆರಕ್ಷಕ ವೃತ್ತ ನಿರೀಕ್ಷಕರು, ಮೇಲಿನ ಇಲಾಖೆಗಳ ಅಧೀನ ಸಿಬ್ಬಂದಿಗಳು ಈ ತಂಡದ ಸದಸ್ಯರಾಗಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ಗಮನಿಸುವುದು ಮತ್ತು ಸುಳ್ಳು ಸುದ್ದಿ ಹರಡದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು. ಔಷಧ ಮಳಿಗೆ, ಮಾಲ್‌ಗಳು ಮುಂತಾದ ಸ್ಥಳಗಳಲ್ಲಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಆಕಸ್ಮಿಕ ಭೇಟಿ ನೀಡಿ ಅಗತ್ಯ ವಸ್ತುಗಳ ಕಾಯ್ದೆ ೧೯೫೫, ೨೦೨೦ ಮತ್ತು ಪೊಟ್ಟಣ ಸಾಮಗ್ರಿಗಳ ಕಾಯ್ದೆಯಡಿ ನಿಯಮಾನುಸಾರ ಕಾನೂನು ಕ್ರಮಗಳನ್ನು ಜರುಗಿಸುವುದು. ಇಂತಹ ಸಾಮಗ್ರಿಗಳನ್ನು ಅಕ್ರಮವಾಗಿ ಸಂಗ್ರಹಿಸುವುದು ಕಂಡುಬಂದಲ್ಲಿ ಹಾಗೂ ನಕಲಿ, ಇತರೆ ಅಂತಹ ಸಾಮಗ್ರಿಗಳ ದಾಸ್ತಾನು ಕಂಡು ಬಂದಲ್ಲಿ ಸರ್ಕಾರದ ವಶಕ್ಕೆ ಪಡೆಯುವುದು.

ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾಸ್ಕ್ ಸ್ಯಾನಿಟೈಸರ್ ಇತರೆ ಸುರಕ್ಷಿತ ವಸ್ತುಗಳ ಮಾರಾಟ ನಿಯಂತ್ರಣ ತಂಡ: ದಾವಣಗೆರೆ ಜಿಲ್ಲಾ ಉಪ ಔಷಧ ನಿಯಂತ್ರಕರು ಈ ತಂಡದ ಸದಸ್ಯರಾಗಿರುತ್ತಾರೆ. ಔಷಧ ಮಳಿಗೆ, ಸಗಟು ಮತ್ತು ರಿಟೇಲ್ ವರ್ತಕರು ಜೀವನಾವಶ್ಯಕ ವಸ್ತುಗಳನ್ನು ಅನಧಿಕೃತವಾಗಿ ದಾಸ್ತಾನು ಮಳಿಗೆಗಳಲ್ಲಿ ದಾಸ್ತಾನು ಮಾಡದಂತೆ ಕ್ರಮವಹಿಸುವುದು ಮತ್ತು ಅನಧಿಕೃತ ದಾಸ್ತಾನು ಕಂಡುಬಂದಲ್ಲಿ ಅವರುಗಳ ವಿರುದ್ದ ನಿಯಮಾನುಸಾರ ಕಾನೂನು ಕ್ರಮವಹಿಸುವುದು ಮತ್ತು ತಪಾಸಣೆ ತೀವ್ರಗೊಳಿಸುವುದು.

ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಪಂಚಾಯತಿ ಮಟ್ಟದಲ್ಲಿ ಸಂಬಂಧಪಟ್ಟ ಪಂಚಾಯತಿ ಅಧಿಕಾರಿಗಳನ್ನು ಬಳಸಿಕೊಂಡು ತಂಡಗಳನ್ನು ರಚಿಸುವುದು ಹಾಗೂ ಪ್ರತಿ ದಿನ ತಂಡಗಳ ಮೇಲ್ವಿಚಾರಣೆ ಮಾಡುವುದು ಹಾಗೂ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆರೋಗ್ಯ ಕೇಂದ್ರಗಳ ಮತ್ತು ಪುರಸಭೆ ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.