ಕೋವಿಡ್ ಕೇರ್ ಸೆಂಟರ್‌ನ ಊಟ ಮಾಡಿದ ರೇಣುಕಾಚಾರ್ಯ

468

ಹೊನ್ನಾಳಿ: ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿನ ಕೋವಿಡ್ ಕೇರ್ ಸೆಂಟರ್‌ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಸೋಂಕಿತರ ಆರೋಗ್ಯ ವಿಚಾರಿಸಿ, ಮೂಲಭೂತ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ಇದರ ಜೊತೆಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸೋಂಕಿತರಿಗೆ ನೀಡುವ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಿ ಮಾತನಾಡಿದ ರೇಣುಕಾಚಾರ್ಯ, ಮಾದನಬಾವಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇದೇ ರೀತಿಯ ಆರೋಪ ಕೇಳಿ ಬಂದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗುಣಮಟ್ಟದ ಆಹಾರ ನೀಡುವಂತೆ ಸೂಚನೆ ನೀಡಿz. ಇದೀಗ, ಎಚ್. ಕಡದಕಟ್ಟೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅದೇ ರೀತಿಯ ಆರೋಪ ಕೇಳಿ ಬಂದಿದೆ. ಗುಣಮಟ್ಟದ ಆಹಾರ ನೀಡುವತ್ತ ಸಿಬ್ಬಂದಿ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಕೋವಿಡ್ ಕೇರ್
ಸೆಂಟರ್‌ನ ಊಟ:
ಕೋವಿಡ್ ಕೇರ್ ಸೆಂಟರ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ತಮ್ಮ ಸಹೋದರ ಎಂ.ಪಿ. ರಮೇಶ್ ಹಾಗೂ ಇತರರ ಆರೋಗ್ಯ ವಿಚಾರಿಸಿದ ರೇಣುಕಾಚಾರ್ಯ, ಎಲ್ಲರೊಂದಿಗೆ ಕೋವಿಡ್ ಕೇರ್ ಸೆಂಟರ್‌ನ ಊಟ ಮಾಡಿದರು. ಕೋರೊನಾ ಸೋಂಕಿತರಿದ್ದರೆ ಅತ್ತ ಯಾವೊಬ್ಬ ಜನಪ್ರತಿನಿಧಿಯೂ ತಲೆ ಹಾಕುವುದಿಲ್ಲ. ಅಂತಹುದರಲ್ಲಿ, ನಾನು ಕಂಟೇನ್ಮೆಂಟ್ ಝೋನ್‌ಗಳು ಸೇರಿದಂತೆ ಕೋವಿಡ್ ಕೇರ್ ಸೆಂಟರ್‌ಗಳಿಗೂ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸುವ ಕೆಲಸ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಅವಳಿ ತಾಲೂಕಿನ ಜನರು ಕೊರೊನಾ ಕಾಯಿಲೆಗೆ ಹೆದರುವುದು ಬೇಡ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಧೈರ್ಯ ತುಂಬಿದರು.
ನ್ಯಾಮತಿ ತಾಪಂ ಅಧ್ಯಕ್ಷ ಎಸ್.ಪಿ. ರವಿಕುಮಾರ್, ಮುಖಂಡ ಅಜಯ್ ಕುಮಾರ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.