ಕೊರೋನಾ ತಡೆಯುವಲ್ಲಿ ಪೌರ ಕಾರ್ಮಿಕರ ಶ್ರಮ ಅಪಾರ…

467

ಶಿಕಾರಿಪುರ: ವೈಯುಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸದೆ ಸಂಪೂರ್ಣ ಪಟ್ಟಣದ ಸ್ವಚ್ಚತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರು ಸಮಾಜವನ್ನು ಕಾಡುತ್ತಿರುವ ಭಯಾನಕ ಕರೋನಾ ತಡೆಗಟ್ಟುವಲ್ಲಿ ವಹಿಸುತ್ತಿರುವ ಶ್ರಮ ಅಪಾರ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಪಟ್ಟಣದ ಪುರಸಭೆಯಲ್ಲಿ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯ ಬೆಳಿಗ್ಗೆ ಪಟ್ಟಣವನ್ನು ಶುಚಿಗೊಳಿಸುವ ಪೌರಕಾರ್ಮಿಕರ ಸೇವೆಯನ್ನು ಸಮಾಜ ಎಂದಿಗೂ ಮರೆಯಲಸಾಧ್ಯ ಶುಚಿತ್ವದ ಮೂಲಕ ಜನತೆಯ ಆರೋಗ್ಯ ಕಾಪಾಡಲು ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ ಎಂದ ಅವರು ವೈಯುಕ್ತಿಕ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನಹರಿಸದೆ ಪಟ್ಟಣದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವ ಪೌರಕಾರ್ಮಿಕರು ಸಮಾಜವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಭಯಾನಕ ಕರೋನಾ ತಡೆಗಟ್ಟುವಲ್ಲಿ ವಹಿಸುತ್ತಿ ರುವ ಶ್ರಮ ಅಪಾರವಾಗಿದೆ ಎಂದು ಶ್ಲಾಸಿದರು.
ಸರ್ಕಾರ ಪೌರಕಾರ್ಮಿಕರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದ ಅವರು ಪೌರಕಾರ್ಮಿಕರಿಗೆ ಮನೆ ಮತ್ತಿತರ ಅಗತ್ಯ ಸೌಲಭ್ಯವನ್ನು ಶೀಘ್ರವೇ ದೊರಕಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಬರವಸೆ ನೀಡಿದರು.
ಈ ಸಂದರ್ಬದಲ್ಲಿ ಪೌರ ಕಾರ್ಮಿಕರು, ಸರ್ಕಾರದಿಂದ ಕೆಜಿಐಡಿ, ಜಿಪಿಎಫ್ ಸೌಲಭ್ಯ, ನಗದು ರಹಿತ ಜ್ಯೋತಿ ಸಂಜೀವಿನಿ ಯೋಜನೆಯನ್ನು ಸ್ಥಳೀಯ ಸಂಸ್ಥೆ ನೌಕರರಿಗೆ ಜಾರಿ ಗೊಳಿಸುವಂತೆ, ವಾಹನ ಚಾಲಕರಿಗೆ ನೀರು ಸರಬರಾಜು ಸಹಾಯಕರಿಗೆ ನೇರಪಾವತಿಯಡಿ ವೇತನ ಪಾವತಿಸಲು ಕ್ರಮ ವಹಿಸುವಂತೆ, ಸ್ಥಳೀಯ ಸಂಸ್ಥೆ ಎಲ್ಲ ಅಧಿಕಾರಿ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಮುಂಬಡ್ತಿಗೆ ಕ್ರಮವಹಿಸುವಂತೆ ಬೇಡಿಕೆಯ ಮನವಿ ಪತ್ರವನ್ನು ಸಂಸದರಿಗೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಪುರಸಭಾ ಸದಸ್ಯ ಪಾಲಾಕ್ಷಪ್ಪ, ಪ್ರಶಾಂತ್ ಜೀನಳ್ಳಿ, ಮುಖ್ಯಾಧಿಕಾರಿ ಸುರೇಶ್, ರಾಜಕುಮಾರ್, ರಾಮಚಂದ್ರಪ್ಪ, ಪರಶುರಾಮಪ್ಪ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಗೋಪಿ ಸಹಿತ ಎಲ್ಲ ವಿಭಾಗದ ಕಾರ್ಮಿಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.