ಕೊರೋನಾ ಆತಂಕ: ಸಿಇಟಿ ಪರೀಕ್ಷೆ ಮುಂದೂಡಲು ಎನ್‌ಎಸ್‌ಯುಐ ಆಗ್ರಹ

553

ಶಿವಮೊಗ್ಗ: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಸಿಇಟಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಇಂದು ವಿನೋಬನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಈಗಿನ ಸ್ಥಿತಿಯಲ್ಲಿ ಸಿಇಟಿ, ಪದವಿ ಪರೀಕ್ಷೆಯನ್ನು ನಡೆಸಬಾರದು. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಪೋಷಕರು ಆತಂಕಕ್ಕೆ ಒಳಗಾಗಿದ್ದು, ಪರೀಕ್ಷೆ ನಡೆಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಪುನರ್ ವಿಮರ್ಶೆ ಮಾಡ ಬೇಕು. ಸಿಇಟಿ ಪರೀಕ್ಷೆ ಮುಂದೂಡಬೇಕು ಎಂದು ಆಗ್ರಹಿಸಿ ಸಾಂಕೇತಿಕವಾಗಿ ಪಿಪಿಇ ಕಿಟ್ ಧರಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರತಿಭಟನೆ ಮಾಹಿತಿ ಇದ್ದ ಪೊಲೀಸರು ಮೊದಲೇ ಸೂಕ್ತ ಬಂದೋಬಸ್ತ್ ವಹಿಸಿದ್ದರಿಂದ ಪ್ರತಿಭಟನೆ ಅವಕಾಶ ನೀಡದೇ ಎನ್‌ಎಸ್‌ಯುಐ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಇಂದಿನ ಪತ್ರಿಭಟನೆಯ ನೇತೃತ್ವವನ್ನು ಮಧುಸೂದನ್, ಚೇತನ್, ಬಾಲಾಜಿ, ಶ್ರೀಜಿತ್ ವಹಿಸಿದ್ದು, ನೂರಾರು ಕಾರ್‍ಯಕರ್ತರು ಪಾಲ್ಗೊಂಡಿದ್ದರು.