ಕೊರೋನಾದಿಂದ ಬಚಾವಾಗಲು ಸ್ವಯಂ ನಿರ್ಬಂಧ, ಮನೆಯಿಂದ ಹೊರಗೆ ಬರದಿರುವುದು

613

ಸಾಗರ : ಕೊರೋನಾದಿಂದ ಬಚಾವಾಗಲು ಸ್ವಯಂ ನಿರ್ಬಂಧ, ಮನೆಯಿಂದ ಹೊರಗೆ ಬರದಿರುವುದು, ಸಾರ್ವಜನಿಕವಾಗಿ ಗುಂಪು ಸೇರಿ ಚರ್ಚೆ ಮಾಡದಿರುವುದು, ಆಗಾಗ ಕೈ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸರ್ಕಾರ ಸೂಚನೆ ಮಾಡಿರುವ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂದು ಹೆಸರಾಂತ ವೈದ್ಯ ಡಾ. ಅರುಣಕುಮಾರ್ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊರೋನಾ ಕುರಿತ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಕೊರೋನಾ ಬರದಂತೆ ನೋಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ನಮ್ಮ ಜನರಲ್ಲಿ ಇಂದಿಗೂ ಕೊರೋನಾ ಕುರಿತು ಸಂಪೂರ್ಣ ಅರಿವು ಮೂಡಿಲ್ಲ. ಸರ್ಕಾರ ಕೆಲವು ಸೂಚನೆಗಳನ್ನು ನೀಡಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವತ್ತ ಯಾರೂ ಗಮನ ಹರಿಸುವುದಿಲ್ಲ. ಇತರೆ ವೈರಸ್‌ನಂತೆ ಕೊರೋನಾ ವಾತಾವರಣಕ್ಕೆ ಬಂದ ತಕ್ಷಣ ಸಾಯುವುದಿಲ್ಲ. ಅದು ಕೆಲವು ಗಂಟೆಗಳ ಕಾಲ ಜೀವಂತವಿದ್ದು, ಮನುಷ್ಯನ ದೇಹವನ್ನು ಸೇರಿಕೊಳ್ಳುವ ಸಾಧ್ಯತೆ ಇರುವುದರಿಂದ ಕೊರೋನಾ ಸೋಂಕು ತಗುಲಿದವರಿಂದ ಜನರು ದೂರ ಇರಬೇಕು ಎಂದು ತಿಳಿಸಿದರು.

ಕೊರೋನಾ ಗಾಳಿಯ ಮೂಲಕ ಹರಡುವುದಿಲ್ಲ. ಕೊರೋನಾ ಸೋಂಕಿತರು ಸೀನಿದಾಗ, ಕೆಮ್ಮಿದಾಗ ಅದು ಆರೋಗ್ಯವಂತ ವ್ಯಕ್ತಿಯ ದೇಹಕ್ಕೆ ಸೇರಿ ಅವನು ಸಹ ಸೋಂಕಿಗೆ ಒಳಗಾಗುತ್ತಾನೆ. ಕೊರೋನಾ ಒಬ್ಬರಿಗೆ ಬಂದರೆ ಅದು ಕನಿಷ್ಟ ೩ಜನರಿಗೆ ಹರಡುತ್ತದೆ. ಜ್ವರ, ಮೈಕೈನೋವು, ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಸಹಜವಾಗಿ ಕೊರೋನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಕೊರೋನಾ ವೈರಾಣು ದಾಳಿ ಮಾಡುವುದರಿಂದ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಕೊರೋನಾ ಶೇ. ೮೧ರಷ್ಟು ಜನರಿಗೆ ಬರುವುದಿಲ್ಲ. ಶೇ. ೧೩ರಷ್ಟು ಜನರಿಗೆ ಕೊರೋನಾ ತಗುಲಿದರೂ ಅವರು ಗುಣಮುಖರಾಗುತ್ತಾರೆ. ಶೇ. ೩ ರಿಂದ ೪ರಷ್ಟು ಜನರಿಗೆ ಮಾತ್ರ ಕೊರೋನಾ ಅಪಾಯಕಾರಿ. ಸೂಕ್ತ ಮುಂಜಾಗೃತೆ ವಹಿಸಿದರೆ ಇದರಿಂದಲೂ ಬಚಾವಾಗಬಹುದು. ಕೊರೋನಾ ವಯಸ್ಸಾದವರಿಗೆ, ಚಿಕ್ಕಮಕ್ಕಳಿಗೆ ಬರುತ್ತದೆ ಎನ್ನುವ ಮಾತು ಸರಿಯಲ್ಲ. ಕೊರೋನಾ ಎಲ್ಲ ವಯೋಮಾನದವರಿಗೂ ಬರುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ರಮುಖವಾಗಿ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆ ಇದ್ದವರು ಹೆಚ್ಚು ಜಾಗೃತೆಯಿಂದ ಇರಬೇಕು ಎಂದರು.

ಜಿಲ್ಲೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಅಗತ್ಯವಾಗಿ ತೆಗೆದುಕೊಳ್ಳುವ ಸಂದಿಗ್ದತೆ ಸೃಷ್ಟಿಯಾಗಿದೆ. ಇಟಲಿಯಂತಹ ದೇಶವೇ ಕೊರೋನಾ ಹೊಡೆತಕ್ಕೆ ತತ್ತರಿಸಿ ಹೋಗಿದೆ. ನಾವು ಕೊರೋನಾ ಹರಡದಂತೆ ನೋಡಿಕೊಳ್ಳದೆ ಹೋದಲ್ಲಿ ನಮ್ಮಲ್ಲಿರುವ ವೈದ್ಯಕೀಯ ವ್ಯವಸ್ಥೆ ಹೆಚ್ಚು ಜನರು ಸೋಂಕಿಗೆ ಒಳಗಾದರೆ ಚಿಕಿತ್ಸೆ ಕೊಡಲು ಕಷ್ಟಸಾಧ್ಯವಾಗಬಹುದು. ಸರ್ಕಾರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ಒಂದಿಲ್ಲೊಂದು ಆಲೋಚನಾ ಕ್ರಮ ಇರುತ್ತದೆ. ಕೊರೋನಾ ನಮ್ಮಿಂದ ಬೇರೆಯವರಿಗೆ ಹರಡಬಾರದು ಎನ್ನುವ ಶ್ರೇಷ್ಟತೆ ಸೋಂಕುಪೀಡತರು ಹೊಂದಬೇಕು ಎಂದರು.

ಎಲ್ಲರೂ ಮಾಸ್ಕ್ ಧರಿಸಬೇಡಿ : ಕೊರೋನಾ ಭೀತಿ ಎದುರಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಫ್ಯಾಶನ್ ಆಗಿ ಬಿಟ್ಟಿದೆ. ಕೊರೋನಾ ಗಾಳಿಯ ಮೂಲಕ ಹರಡುವುದಿಲ್ಲವಾದ್ದರಿಂದ ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಚಿಕಿತ್ಸೆ ನೀಡುವ ವೈದ್ಯಸಿಬ್ಬಂದಿಗಳು ಇತರೆ ರೋಗಿಗಳ ಹಿತದೃಷ್ಟಿಯಿಂದ ಮಾಸ್ಕ್ ಧರಿಸುವುದು ಕಡ್ಡಾಯವೇ ಹೊರತು, ಚಿಕಿತ್ಸೆಗೆ ಬರುವ ಎಲ್ಲ ರೋಗಿಗಳು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಒಮ್ಮೆ ಧರಿಸಿದ ಮಾಸ್ಕ್ ಇನ್ನೊಮ್ಮೆ ಧರಿಸುವುದರಿಂದ ಬೇರೆ ಕಾಯಿಲೆ ಹರಡುವ ಸಾಧ್ಯತೆ ಸಹ ಇರುತ್ತದೆ. ಕೊರೋನಾ ತಡೆಗಟ್ಟುವ ವ್ಯಾಕ್ಸಿನ್ ಇನ್ನೂ ಕಂಡು ಹಿಡಿದಿಲ್ಲ. ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳಿಗೆ ಜನರು ಕಿವಿಗೊಡಬಾರದು. ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್‌ನಲ್ಲಿ ಕೊರೋನಾ ಕುರಿತು ನೀಡುವ ಮಾಹಿತಿ ಹೊರತುಪಡಿಸಿ ಇತರೆ ಮಾಹಿತಿಗಳನ್ನು ಜನರು ನಂಬಬಾರದು ಎಂದು ಸಲಹೆ ನೀಡಿದರು.

ಪತ್ರಿಕೆಯಿಂದ ಕೊರೋನಾ ಹರಡುವುದಿಲ್ಲ : ದಿನಪತ್ರಿಕೆಗಳಿಂದ ಕೊರೋನಾ ಹರಡುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ದಿನಪತ್ರಿಕೆ ಹಾಕುವ ಹುಡುಗನಿಗೆ ಒಂದೊಮ್ಮೆ ಕೊರೋನಾ ಬಂದಿದ್ದರೆ, ಆ ಹುಡುಗ ಪೇಪರ್‌ನಲ್ಲಿ ಮುಖ ಒರಿಸಿಕೊಂಡಿದ್ದರೆ, ಆ ಪತ್ರಿಕೆ ಇನ್ನೊಬ್ಬರು ಕೈನಲ್ಲಿ ಹಿಡಿದು ಓದಿ ಅದೇ ಕೈನಲ್ಲಿ ತಮ್ಮ ಬಾಯಿ, ಕಣ್ಣು, ಮೂಗನ್ನು ಸವರಿಕೊಂಡರೆ ಮಾತ್ರ ಕೊರೋನಾ ಹರಡುವ ಸಾಧ್ಯತೆ ಇರುತ್ತದೆ. ಇದು ಸಾಧ್ಯವಿಲ್ಲದ ಸಂಗತಿ. ಈ ಹಿನ್ನೆಲೆಯಲ್ಲಿ ಅನಗತ್ಯ ಸುದ್ದಿಗಳನ್ನು ಕೊರೋನಾ ಬಗ್ಗೆ ಹರಡಬಾರದು ಎಂದು ಹೇಳಿದರು.

ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ ಕೊರೋನಾ ಕುರಿತು ಜನರಲ್ಲಿ ಇರುವ ಆತಂಕ ಮೊದಲು ದೂರ ಮಾಡಬೇಕು. ರಾಜ್ಯ ಸರ್ಕಾರ ಕೊರೋನಾ ತಡೆ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು. ಸಾಮೂಹಿಕ ಸ್ವಯಂ ನಿರ್ಬಂಧವೊಂದೆ ಕೊರೋನಾ ಮಾರಿ ಹೊಡೆದೋಡಿಸುವ ಉಪಾಯವಾಗಿದೆ. ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕೊರೋನಾ ವಿರುದ್ದ ಸಮರ ಸಾರಲು ಸರ್ಕಾರಿ, ಖಾಸಗಿ ವೈದ್ಯಸಿಬ್ಬಂದಿಯನ್ನು ಒಳಗೊಂಡ ತಂಡ ಸಿದ್ದವಾಗಿದೆ. ಸಾಮೂಹಿಕ ಹೊಣೆಗಾರಿಕೆ ಮೂಲಕ ಕೊರೋನಾ ತಡೆಗಟ್ಟಲು ಎಲ್ಲರೂ ಪ್ರಯತ್ನ ನಡೆಸಬೇಕು ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಗಡೆ ಲ್ಯಾಬ್‌ನ ರವೀಂದ್ರ ಹೆಗಡೆ, ಪತ್ರಕರ್ತರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವಿನಾಯ್ಡು ಉಪಸ್ಥಿತರಿದ್ದರು. ರಾಜೇಶ್ ಬಡ್ತಿ ಸ್ವಾಗತಿಸಿದರು. ಎಂ.ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು. ದೀಪಕ್ ಸಾಗರ ನಿರೂಪಿಸಿದರು.