ಕೊಡುವುದರಲ್ಲಿ ಅಡಗಿದೆ ಜೀವನದ ಯಶಸ್ಸು : ಡಾ.ಗುರುರಾಜ್ ಕರ್ಜಗಿ

439

ದಾವಣಗೆರೆ: ಸಮಾಜಕ್ಕೆ, ದೇಶಕ್ಕೆ ನಾವೇನು ಕೊಡುಗೆ ನೀಡುತ್ತೇವೆ ಎಂಬುದರಲ್ಲಿ ಮನುಷ್ಯನ ಜೀವನದ ಯಶಸ್ಸು ಅಡಗಿದೆಯೇ ಹೊರತು ಸಮಾಜದಿಂದ ನಾವೇನು ಪಡೆದೆವು ಎಂಬುದರಲ್ಲಿ ಅಲ್ಲ ಎಂದು ಶಿಕ್ಷಣ ಚಿಂತಕ ಹಾಗೂ ಸೃಜನಾತ್ಮಕ ಬೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಗುರುರಾಜ್ ಕರ್ಜಗಿ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯ ದಲ್ಲಿ ಗುರುವಾರ ಏರ್ಪಡಿಸಿದ್ದ ೮ ನೇ ಘಟಿಕೋತ್ಸವ, ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಾಧನೆ, ಯಶಸ್ಸು, ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮಹತ್ವಾಂಕ್ಷೆಯ ಉದ್ದೇಶ, ಸಮಾಜಕ್ಕಾಗಿ ಸಲ್ಲಿಸಿದ ಸೇವೆ, ನೀಡಿದ ಕೊಡುಗೆಗಳೇ ಅದರ ಮಾನದಂಡವಾಗಿರುತ್ತದೆ, ಅವುಗಳೇ ವ್ಯಕ್ತಿಯ ವ್ಯಕ್ತ್ತಿತ್ವವನ್ನು ರೂಪಿಸುತ್ತದೆ ಎಂದು ತಿಳಿಸಿದರು.
ಯಶಸ್ಸಿನ ಬಗ್ಗೆ ಪ್ರತಿಯೊಬ್ಬರಲ್ಲೂ ಒಂದೊಂದು ಬಗೆಯ ಕಲ್ಪನೆ ಇರುತ್ತದೆ. ಕೆಲವರಿಗೆ ಹಣ ಗಳಿಕೆಯೇ ಯಶಸ್ಸು ಎನಿಸಿದರೆ, ಇನ್ನೂ ಕೆಲವರಿಗೆ ಆಸ್ತಿ, ಅಂತಸ್ತು ಆಗಿರುತ್ತದೆ. ಇನ್ನಷ್ಟು ಜನರಿಗೆ ತಮ್ಮಲ್ಲಿರುವ ದೈಹಿಕ ಬಲ ಸಾಮರ್ಥ್ಯ, ಗಳಿಕೆ, ಉದ್ಯಮ, ಇತ್ಯಾದಿಗಳೇ ಯಶಸ್ಸು ಎನಿಸುತ್ತವೆ. ಆದರೆ ಅವುಗಳಿಗಿಂತ ಇನ್ನೊಬ್ಬರ ಹೃದಯದಲ್ಲಿ ನೆಲೆಗೊಳ್ಳುವುದು ಬಹುದೊಡ್ಡ ಸಾಧನೆ ಎಂಬುದನ್ನು ಅರಿಯಬೇಕು ಎಂದರು.
ಕೊಡಲು ನಿಮ್ಮ ಬಳಿ ಏನೂ ಇಲ್ಲದೆ ಇದ್ದರೂ ಚಿಂತೆಯಿಲ್ಲ, ನೀಡುವ ತೆರೆದ ಹೃದಯವಿದ್ದರೆ ಸಾಕು. ಕೊಡಲು ಇಂತಹದ್ದೇ ಬೇಕೆಂಬುದನ್ನು ಹೃದಯ ಬೇಡುವುದಿಲ್ಲ. ಕೆಲವರಿಗೆ ಸಮಯ ನೀಡಿದರೂ ಸಾಕು. ಸ್ನೇಹಿತರ ಜೊತೆ ಸಮಯ ಕಳೆದರೂ ಮನಸ್ಸು ಹಗುರಾಗುತ್ತದೆ. ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ನೋವಿಗೆ ಸ್ಪಂದನೆ, ಪ್ರೀತಿಗೆ ಪ್ರೀತಿ ನೀಡಿದರೂ ಸಾಕು, ಕೆಲವರಿಗೆ ಮಾರ್ಗದರ್ಶನ, ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಕೊಡುವುದರಲ್ಲಿಯೂ ಯಶಸ್ಸು ಅಡಗಿದೆ ಎಂದು ನುಡಿದರು.
ಬುದ್ಧ, ಗಾಂಧಿ, ಅಂಬೇಡ್ಕರ್, ಮದರ್ ತೆರೇಸಾ, ಮಾರ್ಟಿನ್ ಲೂಥರ್ ಕಿಂಗ್ ಅವರೆ ಇಷ್ಟು ವರ್ಷವಾದರೂ ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದಿzರೆ. ಅಷ್ಟೇ ಅಲ್ಲ ರಾಮ, ಕೃಷ್ಣ, ಶಂಕರಾಚಾರ್ಯ ಮೊದಲಾದವರು ಶತಶತಮಾನ ಕಳೆದರೂ ಎಲ್ಲರ ಬಾಯಿಯಲ್ಲಿ, ಹೃದಯದಲ್ಲಿ ನೆಲೆಸಿzರೆ. ಇವರು ಸಮಾಜಕ್ಕೆ ನೀಡಿದ ಕೊಡುಗೆಯೇ ಇದಕ್ಕೆ ಕಾರಣ. ಮನುಷ್ಯ ಸತ್ತಾಗ ಹೇಗೆ ಸತ್ತ ಎಂದು ಕೇಳುವುದಿಲ್ಲ, ಹೇಗೆ ಬದುಕಿದ್ದ ಎಂದು ನೊಡುತ್ತಾರೆ. ಹಾಗೆಯೇ ಏನು ಗಳಿಸಿದ ಎಂಬುದನ್ನು ವಿಚಾರಿಸುವುದಿಲ್ಲ. ಸಮಾಜಕ್ಕೆ ಏನು ಕೊಟ್ಟ ಎಂಬುದನ್ನು ಮಾತ್ರ ಅವಲೋಕಿಸುತ್ತಾರೆ. ಆದ್ದರಿಂದ ಎಲ್ಲರ ಮನದಲ್ಲಿ ನೆಲೆಗೊಳ್ಳುವ ಸಂಕಲ್ಪ ಮಾಡಿಕೊಳ್ಳಿ. ಎಲ್ಲರಲ್ಲೂ ಆ ಸಾಮರ್ಥ್ಯವಿದೆ. ಅದನ್ನು ಸರ್ಮಪಕ ವಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.
ಇನ್ನೊಬ್ಬರ ಹೃದಯದಲ್ಲಿ ನೆಲೆಸಲು ಹಣ, ಆಸ್ತಿ, ಅಂತಸ್ತು ಅಥವಾ ತೋಳ್ಬಲ ಬೇಕಿಲ್ಲ, ಕೇವಲ ಪ್ರೀತಿ, ಸಹಾನುಭೂತಿ, ವಿಶ್ವಾಸದ ಎರಡು ಮಾತುಗಳು ಸಾಕು. ಇನ್ನೊಬ್ಬರ ಮನದಲ್ಲಿ ನೆಮ್ಮದಿ ಸಂತಸದ ಎರಡು ಭಾಷ್ಪ ಹೊರ ಬಂದರೂ ಅದು ಯಶಸ್ಸು ಎನಿಸುತ್ತದೆ. ಇದನ್ನು ಸಾಕಾರಗೊಳಿಸಲು, ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಲು ನಿರ್ಮಲವಾದ ಪ್ರೀತಿ ತುಂಬಿದ ಹೃದಯಬೇಕು. ಆ ಹೃದಯವನ್ನು ಬೇರೆಯವರ ಹಿತಕ್ಕಾಗಿ, ನೆಮ್ಮದಿ ಯಾಗಿ, ಸಮಾಜದ ಒಳಿತಿಗಾಗಿ ವಿನಿಯೋಗಿಸಿದರೆ ಯಶಸ್ಸು ತಾನಾಗಿಯೇ ಬರುತ್ತದೆ ಎಂದರು.
ನಾನು-ನನ್ನದು ಎಂಬ ಸ್ವಾರ್ಥ ಬಿಟ್ಟು ನಮ್ಮದು, ನಮ್ಮವರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಆಗ ಪ್ರೀತಿ, ಆತ್ಮೀಯತೆ, ಸಂಬಂಧ ಹತ್ತಿರವಾಗುತ್ತದೆ. ದ್ವೇಷ ತಾನಾಗಿಯೇ ದೂರವಾಗುತ್ತದೆ. ಹೃದಯಗಳು ಹತ್ತಿರವಾಗಿ ನೆಮ್ಮದಿ, ಸಂತಪ್ತಿ ಹೆಚ್ಚಾಗುವುದು. ಆ ಮೂಲಕ ವೈಯಕ್ತಿಕ ಹಾಗೂ ಸಮಾಜದ ಆರೋಗ್ಯ ಸುಧಾರಿಸುವುದು. ಸದೃಢ ಆರೋಗ್ಯವಂತ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಇದು ಹೊರಗೆ ಸಿಗುವ ವಸ್ತುವಲ್ಲ, ಪ್ರತಿಯೊಬ್ಬರ ಮನಸ್ಸಿನಲ್ಲಿ ಅಡಗಿರುವ ಪರಮೋಚ್ಛ ಸಂಕಲ್ಪ. ಅದನ್ನು ಸದ್ಬಳಕೆಗೆ ಉಪಯೋಗಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ನೀಡುವ ವಿಚಾರ ಹೃದಯ ಮತ್ತು ಮಿದುಳಿಗೆ ಸಂಬಂಧಿಸಿದ್ದು. ಹೃದಯ ಮಿಡಿತಕ್ಕೆ ಮಿದುಳು ಸ್ಪಂದಿಸುತ್ತದೆ. ನೀಡಿದ್ದು ಸದ್ವಿನಿಯೋಗವಾದರೆ ಎರಡೂ ನೆಮ್ಮದಿಯಾಗಿರುತ್ತವೆ. ನೆಮ್ಮದಿ ಇzಗ ಆರೋಗ್ಯ ಸುಧಾರಿಸುತ್ತದೆ. ಆರೋಗ್ಯಪೂರ್ಣ ದೇಹಕ್ಕೆ ಆರೋಗ್ಯವಂತ ಮನಸ್ಸು ಮುಖ್ಯ ಎಂಬುದು ಭಾವನಾತ್ಮಕ ಕಲ್ಪನೆಯ ವಿಚಾರವಲ್ಲ. ಇದು ವೈeನಿಕವಾಗಿ ದೃಢಪಟ್ಟಿದೆ. ಖ್ಯಾತ ನರರೋಗ ತಜ್ಞ ಡಾ. ಜೋರ್ಡಾನ್ ಗ್ರಾಫ್‌ಮನ್ ಇದನ್ನೆ ಹೃದಯದಿಂದ ನೀಡಿದರೆ ಮಿದುಳಿಗೆ ತಪ್ತಿಯಾಗುತ್ತದೆ ಎಂಬುದಾಗಿ ಹೇಳಿzರೆ ಎಂದು ಕರ್ಜಗಿ ಹೇಳಿದರು.
ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ದಾವಣಗೆರೆ ವಿವಿ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಕ್ಕೆ ಮಾತ್ರ ಸೀಮಿತ ವಾಗಿರದೆ, ಅವರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಹತ್ತು ಕುಗ್ರಾಮಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಆದ್ಯತೆ ನೀಡಿದೆ. ಆ ಶಾಲೆಯ ಮಕ್ಕಳಿಗೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಗುಣಮಟ್ಟ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ನಾತಕ ಹಾಗು ಸ್ನಾತಕೋತ್ತರ ವಿಭಾಗದ ೪೪ ವಿದ್ಯಾರ್ಥಿಗಳಿಗೆ ೭೪ ಚಿನ್ನದ ಪದಕಗಳನ್ನು ವಿತರಣೆ ಮಾಡಿದರು. ಅಲ್ಲದೇ ೧೧,೧೯೩ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ೭ ಮಂದಿಗೆ ಪಿಎಚ್‌ಡಿ ಹಾಗೂ ಈರ್ವರು ಎಂ.ಫಿಲ್‌ಗೆ ಪದವಿ ಪಡೆದರು.
ಮಲ್ಯಮಾಪನ ಕುಲಸಚಿವೆ ಪ್ರೊ. ಅನಿತಾ. ಹೆಚ್.ಎಸ್, ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ, ಹಣಕಾಸು ಅಧಿಕಾರಿ ಪ್ರಿಯಾಂಕ.ಡಿ, ಪ್ರೊ.ಜೆ.ಕೆ.ರಾಜು, ಪ್ರೊ.ಕೆ.ಬಿ.ರಂಗಪ್ಪ, ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾ ವಿಷಾಯಕ ಪರಿಷತ್ ಸದಸ್ಯರು, ಅಭಿಯಂತರರು, ವಿವಿಧ ನಿಕಾಯದ ಡೀನ್‌ಗಳು, ವಿಭಾಗದ ಅಧ್ಯಕ್ಷರು, ಅಧ್ಯಾಪಕ ಮತ್ತು ಅಧ್ಯಾಪಕೇತರ ನೌಕರರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗೌರವ ಡಾಕ್ಟರೇಟ್ ಪದವಿ : ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಇಬ್ಬರು ಗಣ್ಯರಾದ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಎಂ.ಕೆ. ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಲಾಯಿತು.