ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಅನುದಾನ: ಸಿಎಂಗೆ ಧನ್ಯವಾದ

469

ಶಿವಮೊಗ್ಗ : ನಗರದ ಸಾಗರ ರಸ್ತೆಯ ಕೆಎಸ್‌ಐಡಿಸಿ ಕೈಗಾರಿಕಾ ಪ್ರದೇಶಕ್ಕೆ ಸಿಎಂ ಯಡಿಯೂರಪ್ಪನವರು ವಿಶೇಷ ಅನುದಾನ ನೀಡಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೈಗಾರಿಕೋದ್ಯಮಿ ಹಾಗೂ ವಿಧಾನಪರಿಷತ್ ಶಾಸಕ ಎಸ್.ರುದ್ರೇಗೌಡರು ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸಣ್ಣ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಿ, ಕೈಗಾರಿಕಾ ವಸಾಹತನ್ನು ಸ್ಥಾಪಿಸಲಾ ಗಿದ್ದು, ಇದರಿಂದಾಗಿ ಪ್ರಸಿದ್ಧ ಕೈಗಾರಿಕೆ ಗಳು ಇಲ್ಲಿ ಜನ್ಮ ತಳೆಯುವಂತಾಗಿದೆ. ಶೇಷಾವಸ್ಥೆಯಲ್ಲಿ ಪ್ರಾರಂಭವಾಗಿ ಇತ್ತೀಚಿನ ದಿನಗಲ್ಲಿ ಬೃಹದಾಕಾರವಾಗಿ ಬೆಳೆದು, ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದೆ. ಈ ಮೂಲಕ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದೆ. ಅಲ್ಲದೆ, ಮಲೆನಾಡಿನ ಭಾಗದ ಸಾವಿರಾರು ನಿರುದ್ಯೋಗ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಟ್ಟಿದೆ.
ಅಲ್ಲದೆ, ಸರ್ಕಾರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕರ ಸಂಗ್ರಹಣೆ ಕೂಡಾ ಮಾಡಿಕೊಡುತ್ತಿದೆ. ಕಳೆದ ೨೦೦೬ರಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಟ್ಟು ಸುಮಾರು ವಾರ್ಷಿಕ ೭೦ ಲಕ್ಷ ರೂ.ಗಳ ಕರ ಸಂಗ್ರಹ ಮಾಡುತ್ತಿದೆ. ಆದರೆ ಇದುವರೆಗೂ ಈ ಪ್ರದೇಶಕ್ಕೆ ಯಾವುದೇ ಮೂಲ ಸೌಕರ್ಯವನ್ನು ಸ್ಥಳೀಯ ನಗರಪಾಲಿಕೆ ಅಥವಾ ರಾಜ್ಯ ಸರ್ಕಾರವಾಗಲೀ ಕಲ್ಪಿಸಿರಲಿಲ್ಲ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಾವೂ ಸೇರಿದಂತೆ ಜಿಲ್ಲೆಯ ಬಹುತೇಕ ಕೈಗಾರಿಕೋದ್ಯಮಿಗಳು ಮನವಿ ಸಲ್ಲಿಸಿದ್ದೆವು.
೨೦೧೯-೨೦ರ ಬಜೆಟ್‌ಗೂ ಮುನ್ನ ಮುಖ್ಯಮಂತ್ರಿಗಳಿಗೆ ಈ ವಿಷಯ ಕುರಿತು ಮನವರಿಕೆ ಮಾಡಿಕೊಡಲಾ ಗಿತ್ತು. ಅಲ್ಲದೆ, ಜಿಲ್ಲೆಯ ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪನವರ ಗಮನಕ್ಕೂ ಸಹ ಈ ವಿಷಯವನ್ನು ತರಲಾಗಿತ್ತು. ಮುಖ್ಯಮಂತ್ರಿಗಳು ಕೈಗಾರಿಕಾ ವಸಾಹತುವಿನ ಸಂಘದ ಪದಾಧಿಕಾರಿ ಗಳೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಹತ್ತು ಕೋಟಿ ರೂ. ಮೂಲ ಸೌಕರ್ಯ ಕಲ್ಪಿಸುವುದಕ್ಕಾಗಿ ಬಿಡುಗಡೆ ಮಾಡು ವಂತೆ ಮನವಿ ಮಾಡಲಾಗಿತ್ತು.
ಕೋವಿಡ್‌ನ ಸಂಕಷ್ಟದ ಸಂದರ್ಭ ದಲ್ಲಿ ಆರ್ಥಿಕ ಹಿನ್ನಡೆ ಇದ್ದರೂ ಸಹ ಮುಖ್ಯಮಂತ್ರಿಗಳು ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ಕೆಎಸ್‌ಐಡಿಸಿ ಕೈಗಾರಿಕಾ ಪ್ರದೇಶಕ್ಕೆ ೭.೫ ಕೋಟಿ ರೂ.ಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದಾ ಅಭಿವೃದ್ಧಿಗೆ ಒತ್ತು ನೀಡುವ ಮುಖ್ಯಮಂತ್ರಿಗಳು ಶಿವಮೊಗ್ಗ ನಗರದ ಕೈಗಾರಿಕೋದ್ಯಮಿಗಳ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವುದು ಕೈಗಾರಿಕೆಗಳ ಬಗ್ಗೆ ಅವರಿಗಿರುವ ಕಾಳಜಿ ತೋರಿಸುತ್ತದೆ. ಈ ಅನುದಾನವನ್ನು ಬಿಡುಗಡೆ ಮಾಡುವಲ್ಲಿ ಶ್ರಮಿಸಿದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪನವರಿಗೂ ಸಹ ಈ ಸಂದರ್ಭದಲ್ಲಿ ನಾನು ಹಾಗೂ ನಮ್ಮ ಕೈಗಾರಿಕೋದ್ಯಮಿಗಳು ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಇನ್ನೂ ಹೆಚ್ಚಿನ ಅನುದಾನವನ್ನು ಕೈಗಾರಿಕಾ ಪ್ರದೇಶಕ್ಕೆ ಬಿಡುಗಡೆ ಮಾಡುತ್ತಾರೆಂಬ ನಂಬಿಕೆ ಇದೆ.ಮುಖ್ಯಮಂತ್ರಿಗಳ ಈ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಇದಕ್ಕಾಗಿ ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡರು ತಿಳಿಸಿದ್ದಾರೆ.