ಕೆಎಫ್‌ಡಿ ನಿಯಂತ್ರಣಕ್ಕೆ ವಿಶೇಷ ಕ್ರಮ: ಸಚಿವ ಶ್ರೀರಾಮುಲು

597

ಹೊಸನಾವಿಕ ಪತ್ರಿಕೆಗೆ ಚಂದಾದಾರರಾಗಲು ಮತ್ತು ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ: +91 948 248 2182, e-mail:hosanavika@gmail.com

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತಾಲೂಕುಗಳನ್ನು ಕಾಡುತ್ತಿರುವ ಕೆಎಫ್‌ಡಿ ಸಮರ್ಪಕ ನಿಯಂತ್ರಣಕ್ಕಾಗಿ ವಿಶೇಷ ಸಭೆಯನ್ನು ಕರೆದು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ತಿಳಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಜಿಲ್ಲೆಯಲ್ಲಿ ಕರೋನಾ ಹಾಗೂ ಕೆಎಫ್‌ಡಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು.
ಕೆಎಫ್‌ಡಿ ಬಗ್ಗೆ ಈಗಾಗಲೇ ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ಸಮಗ್ರವಾದ ಮಾಹಿತಿಯನ್ನು ನೀಡಿದ್ದಾರೆ. ಕೆಎಫ್‌ಡಿಗೆ ಸೂಕ್ತ ಔಷಧ ಕಂಡು ಹಿಡಿಯುವುದು ಸೇರಿದಂತೆ ಈ ನಿಟ್ಟಿನಲ್ಲಿ ಆಗಬೇಕಾದ ಸಂಶೋಧನೆಗಳು ಇತ್ಯಾದಿಗಳ ಕುರಿತು ಸಮಾಲೋಚನೆ ನಡೆಸಲು ಉನ್ನತ ಮಟ್ಟದ ಸಭೆಯನ್ನು ಕರೆಯಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ೧೬೮ ಕೆಎಫ್‌ಡಿ ಪ್ರಕರಣಗಳು ವರದಿಯಾಗಿದ್ದು, ತೀರ್ಥಹಳ್ಳಿಯಲ್ಲಿ ೧೩೨ ಹಾಗೂ ಸಾಗರದಲ್ಲಿ ೩೬ ಪ್ರಕರಣ ವರದಿಯಾಗಿದೆ. ಪ್ರಸ್ತುತ ೧೨ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ೫ಸಾವಿರ ರಕ್ತ ಪರಿಶೋಧನೆ ನಡೆಸಲಾಗಿದೆ. ೨ಮಂಗಳಲ್ಲಿ ಪಾಸಿಟಿವ್ ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕರೋನಾ ನಿಯಂತ್ರಣ: ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಕರೋನಾ ಜಿಲ್ಲೆಗೆ ಕಾಲಿರಿಸಿಲ್ಲ. ಆದರೆ ಈ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕರೋನಾ ವಿರುದ್ಧ ದೀರ್ಘಕಾಲೀನ ಹೋರಾಟ ನಡೆಸಬೇಕಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಾ ಇನ್ನೂ ೬-೭ ತಿಂಗಳ ಕಾಲ ಕರೋನಾದೊಂದಿಗೆ ಬದುಕಲು ಮಾನಸಿಕವಾಗಿ ಸನ್ನದ್ಧರಾಗಬೇಕಿದೆ ಎಂದು ಸಚಿವರು ಹೇಳಿದರು.
ಕರೋನಾ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಪ್ರಸ್ತುತ ಕ್ಲಿನಿಕಲ್ ಟೆಸ್ಟಿಂಗ್ ಹಂತದಲ್ಲಿದ್ದು, ಯಶಸ್ವಿಯಾದರೆ ಎಲ್ಲಾ ಜಿಲ್ಲೆಗಳಲ್ಲಿ ಅದನ್ನು ಚಿಕಿತ್ಸೆಗಾಗಿ ಅನುಸರಿಸಲಾಗುವುದು ಎಂದರು.
ಎಲ್ಲಾ ಜಿಲ್ಲೆಗಳಲ್ಲಿರುವ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತ ಸಂಗ್ರಹ ಕಡಿಮೆಯಾಗುತ್ತಿದ್ದು, ರಕ್ತ ನೀಡಲು ದಾನಿಗಳು ಮುಂದೆ ಬರಬೇಕು. ಇದಕ್ಕಾಗಿ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು ಎಂದರು.
ಬಾಕಿ ವೇತನ ಪಾವತಿಗೆ ಕ್ರಮ: ಆರೋಗ್ಯ ಇಲಾಖೆಯಲ್ಲಿ ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಸಿಬ್ಬಂದಿಗಳಿಗೆ ಬಾಕಿ ಇರಿಸಿರುವ ವೇತನ ಪಾವತಿಗೆ ಈಗಾಗಲೆ ೮೦ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಇಲಾಖೆಯಲ್ಲಿ ವಿವಿಧ ಹಂತದಲ್ಲಿ ಸಿಬ್ಬಂದಿಗಳ ವೇತನ ತಾರತಮ್ಯ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಕರೋನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿ, ಲಾಕ್‌ಡೌನ್ ಅವಧಿಯಲ್ಲಿ ೮೪೨ ವಲಸೆ ಕಾರ್ಮಿಕರಿಗೆ ಜಿಲ್ಲೆಯ ೨೦ ಕಡೆಗಳಲ್ಲಿ ವಸತಿ ಕಲ್ಪಿಸಲಾಗಿದೆ. ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅವರನ್ನು ಸ್ವಂತ ಊರುಗಳಿಗೆ ಕಳುಹಿಸಲಾಗುತ್ತಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ತೀರ್ಥಹಳ್ಳಿ ಶಾಸಕ ಅರಗ ಜನೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು