ಕುವೆಂಪು ವಿವಿ ಹೊರಗುತ್ತಿಗೆಯ ಸಿ ಮತ್ತು ಡಿ ದರ್ಜೆನೌಕರರಿಂದ ಪ್ರತಿಭಟನೆ

364

ಶಿವಮೊಗ್ಗ: ಕುವೆಂಪು ವಿವಿ, ಸಹ್ಯಾದ್ರಿ ವಿಜ್ಞಾನ ಕಾಲೇಜು, ವಾಣಿಜ್ಯ ಹಾಗೂ ಕಲಾ ಕಾಲೇಜಿನಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರು ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳ ಸಂಬಳ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ದಲಿತ ಯುವ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಎಸ್‌ಐ ಕಾರ್ಡ್ ವಿತರಿಸಬೇಕು, ಪಿಎಫ್ ಪ್ರತಿ ತಿಂಗಳು ಕಟ್ಟಿ ಪಿಎಫ್ ನೀಡಬೇಕು. ಗುತ್ತಿಗೆದಾರರ ಗುರುತಿನ ಚೀಟಿ ನೀಡಬೇಕು. ಕೆಲಸದ ಅವಧಿ ೧೨ ಗಂಟೆ ಇರುವುದನ್ನು ೮ ಗಂಟೆಗೆ ಇಳಿಸಬೇಕು. ವೇತನ ಸಹಿತ ರಜೆ ನೀಡಬೇಕು ಎಂಬ ಹಕ್ಕೋತ್ತಾಯ ಗಳನ್ನು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಈಶ್ವರಪ್ಪ ಅಲ್ಲೇ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ೪ ತಿಂಗಳಿ ನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ. ವಿಶ್ವವಿದ್ಯಾಲಯ ಪಾಪರ್ ಆಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಐಟಿ ಕಾರ್ಡ್, ಪಿಎಫ್, ಇಎಸ್‌ಐ ಕಲ್ಪಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಗಮನಿಸಬೇಕಿತ್ತು. ೪ ತಿಂಗಳಿಂದ ವೇತನವಿಲ್ಲದೇ ಅವರು ಜೀವನ ನಡೆಸುವುದಾದರೂ ಹೇಗೆ..? ನಿಮಗೆ ಬಡವರ ಕಷ್ಟ ಅರ್ಥವಾಗಲ್ಲ. ಒಂದು ತಿಂಗಳ ವೇತನ ವಿಳಂಬವಾದರೆ ನಿಮಗೆ ಗೊತ್ತಾಗುತ್ತದೆ ಎಂದರು.
ನೀತಿ ಸಂಹಿತೆ ಕಾರಣ ಸಿಂಡಿಕೇಟ್ ಸಭೆ ನಡೆದಿರುವುದಿಲ್ಲ ಎಂದು ಅಧಿಕಾರಿಗಳು ಸವ್ಮಜಾಯಿಷಿ ನೀಡಲು ಮುಂದಾಗುತ್ತಿದ್ದಂತೆ ಕೆಂಡಾ ಮಂಡಲರಾದ ಈಶ್ವರಪ್ಪ ಕ್ಯಾಬಿನೆಟ್ ಮೀಟಿಂಗನ್ನೇ ನಡೆಸುತ್ತೇವೆ. ಸಿಂಡಿಕೇಟ್ ಸಭೆ ನಡೆಸಲು ಆಗುವುದಿಲ್ಲ. ಸಭೆ ನಡೆಸಬಹುದೆಂದು ಅನುಮತಿ ನೀಡಿದ್ದರೂ ಕೂಡ ಏಕೆ, ಸಭೆ ನಡೆಸಿ ಇಂತಹ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈಗಿರುವ ಏಜೆನ್ಸಿಯನ್ನು ರದ್ದುಪಡಿಸಿ ಬಾಕಿ ಉಳಿದ ವೇತನವನ್ನು ಕೊಡಿಸಬೇಕು. ಹೊಸ ಏಜೆನ್ಸಿಗೆ ವಹಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ವಿವಿ ಹಣಕಾಸು ಅಧಿಕಾರಿ ರಾಮಕೃಷ್ಣ ಹಾಗೂ ವಿವಿ ಅಧಿಕಾರಿಗಳು, ಕಾಲೇಜಿನ ಪ್ರಮುಖರು ಇದ್ದರು.
ಪ್ರಮುಖರಾದ ಜಿ.ಎಸ್. ತಿಪ್ಪೇಸ್ವಾಮಿ, ಆರ್.ಶಂಕರ್, ರಿಜ್ವಾನ್ ಅಹಮ್ಮದ್ ಸೇರಿದಂತೆ ಹಲವರಿದ್ದರು.