ಕುರುಬ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಲು ಯಾವ ತ್ಯಾಗಕ್ಕೂ ಸಿದ್ದ: ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ

515

ಶಿಕಾರಿಪುರ: ಕುರುಬ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ದವಿರುವುದಾಗಿ ಕಾಗಿನೆಲೆ ಕನಕಗುರುಪೀಠದ ಪೀಠಾಧ್ಯಕ್ಷ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ ತಿಳಿಸಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಕುರುಬ ಸಮಾಜವನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ಕುರುಬರ ಎಸ್ಟಿ ಹೋರಾಟ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಮೊಗ್ಗ- ಚಿಕ್ಕಮಗಳೂರು ವಿಭಾಗ ಮಟ್ಟದ ಬೃಹತ್ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯಲ್ಲಿನ ಇಚ್ಚಾಶಕ್ತಿಯ ಕೊರತೆಯಿಂದಾಗಿ ಕುರುಬ ಸಮಾಜಕ್ಕೆ ಎಸ್ಟಿ ಸೌಲಭ್ಯ ದೊರೆಯಲಿಲ್ಲ ಎಂದು ವಿಷಾಧಿಸಿದರು.
ಕಾಡುಗಳಲ್ಲಿ ಜೀವಿಸುವ ಕುರುಬರು ಸಾಕಷ್ಟು ಸಂಖ್ಯೆಯಲ್ಲಿದ್ದು ಛತ್ತೀಸ್‌ಘಡದ ಕಾಡುಗಳಲ್ಲಿ ಸಹ ಕುರುಬ ಜನಾಂಗದವರಿದ್ದಾರೆ ರಾಜ್ಯ ದಲ್ಲಿ ಮಾತ್ರ ಕಾಡುಗಳಲ್ಲಿ ಕುರುಬರು ಬದುಕುತ್ತಿಲ್ಲ. ಈ ದಿಸೆಯಲ್ಲಿ ಕುರುಬರನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಕುರುಬ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ದವಿರುವುದಾಗಿ ಘೋಷಿಸಿದ ಅವರು, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳ ಜತೆ ನಿರ್ಧರಿಸಿರುವುದಾಗಿ ತಿಳಿಸಿದರು.
ಹೋರಾಟದ ಭಾಗವಾಗಿ ಜ.೭ ರಂದು ಶಿಕಾರಿಪುರದಲ್ಲಿ ಸ್ಥಳೀಯ ಸಮಾವೇಶವನ್ನು ಆಯೋಜಿಸಲಾ ಗುವುದು ಸೂರ್ಯ ಮಕರ ಸಂಕ್ರಮಣ ದಂದು ಪಥ ಬದಲಿಸಲಿದ್ದು, ಈ ಹಿನ್ನಲೆಯಲ್ಲಿ ಜ.೧೫ ರಂದು ಕಾಲ್ನಡಿಗೆ ಮೂಲಕ ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತೆರಳಲಾಗುವುದು. ಫೆ.೭ ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಸಮಾಜದ ೧೦ ಲಕ್ಷ ಅಧಿಕ ಜನತೆ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸಮುದಾಯ ಸಂಘಟಿತರಾದಲ್ಲಿ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ. ಎಸ್ಟಿ ಪ್ರವರ್ಗಕ್ಕೆ ಸೇರಿಸುವಂತೆ ಈಗಾಗಲೇ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು ಹೋರಾಟದ ರೂಪು ರೇಷೆಯಿಂದಾಗಿ ಕೇಂದ್ರ ಸರ್ಕಾರ ಕರೆದು ಮಾತನಾಡಿಸುತ್ತಿದೆ ಎಂದರು.
ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಸಂಘಟನೆಯ ಕೊರತೆ ಯಿಂದಾಗಿ ಸಮುದಾಯಕ್ಕೆ ಹಕ್ಕು, ಸೌಲಭ್ಯ ತಪ್ಪಿದೆ. ಸಂವಿಧಾನದ ರೀತಿ ಕುರುಬರು ಎಸ್ಟಿ ಪ್ರವರ್ಗಕ್ಕೆ ಅರ್ಹರಿದ್ದು ಇದೀಗ ಉಭಯ ಶ್ರೀಗಳ ನೇತೃತ್ವದಲ್ಲಿ ಸಮುದಾಯ ಜಾಗೃತವಾಗಿದೆ. ಹೋರಾಟದ ಯಶಸ್ಸಿಗೆ ಪ್ರತಿಯೊಬ್ಬರೂ ಪಾಲುದಾರರ ಬೇಕಾಗಿದ್ದು ಇದರಿಂದಾಗಿ ಇತಿಹಾಸ ನಿರ್ಮಾಣವಾಗಬೇಕು ಹೋರಾಟದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹೊಂದಿ ಮುಂದಿನ ಪೀಳಿಗೆ ಸ್ಮರಿಸುವಂತಾಗಬೇಕು ಎಂದ ಅವರು ಸಮುದಾಯಕ್ಕೆ ಹಕ್ಕು ಸೌಲಭ್ಯ ಪಡೆಯುವುದು ಶತಸಿದ್ದ ಇದೀಗ ಹೋರಾಟ ಆರಂಭವಾಗಿದೆ ಎಂದರು.
ಕಾಲ್ನಡಿಗೆ ಕಾಗಿನೆಲೆ ಮೂಲಕ ಬೆಂಗಳೂರಿಗೆ ತೆರಳಲಿದ್ದು ಪ್ರತಿಯೊಬ್ಬರೂ ವೈಯುಕ್ತಿಕ ಖರ್ಚು ವೆಚ್ಚ ಭರಿಸಬೇಕು ಸ್ತಿತಿವಂತರು ಹಿರಿಯರು ಅಶಕ್ತರಿಗೆ ಬಸ್ ಮತ್ತಿತರ ಸೌಲಭ್ಯವನ್ನು ಒದಗಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಮೈಲಾರಪ್ಪ ವಹಿಸಿ ಮಾತನಾಡಿದರು. ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿದ್ದರು. ಜಿ.ಪಂ ಸದಸ್ಯ ಕೆ.ಈ. ಕಾಂತೇಶ್, ರಾಜ್ಯ ಕುರುಬ ಸಮಾಜದ ಸಂ. ಕಾರ್ಯದರ್ಶಿ ಶರತ್, ತಾ. ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಣ್ಣ, ಕಾರ್ಯದರ್ಶಿ ಬಿ.ಎಲ್ ರಾಜಪ್ಪ, ಮುಖಂಡ ನಗರದ ಮಹಾದೇವಪ್ಪ, ಕೆ.ಹಾಲಪ್ಪ, ಗೋಣಿ ಮಾಲತೇಶ, ಮಹೇಶ್ ಹುಲ್ಮಾರ್, ಶೇಷಾದ್ರಿ ಮತ್ತಿತರರು ಉಪಸ್ಥಿತರಿದ್ದರು.