ಕಾಲಕಾಲಕ್ಕೆ ವೇತನ ನೀಡಲು ಆಗ್ರಹ

428

ಶಿವಮೊಗ್ಗ: ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಕಾಲಕಾಲಕ್ಕೆ ವೇತನ ನೀಡಲು ಅಗತ್ಯ ಕ್ರಮ ವಹಿಸಲು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಇಂದು ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಡಿಸಿ ಮೂಲಕ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ನೌಕರರಿಗೆ ಸೇವಾ ಭದ್ರತೆ ನೀಡಿ ಖಾಯಂಗೊಳಿಸಬೇಕು, ಎಲ್ಲ ಹುದ್ದೆ ಗಳನ್ನು ಖಾಯಂ ಹುದ್ದೆಗಳಾಗಿ ಸೃಷ್ಟಿಸಬೇಕು ಹಾಗೂ ಏ.೧ ದಿನದ ವಿರಾಮವನ್ನು ರದ್ದುಪಡಿಸಿ ಆದೇಶ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯ ಸರ್ಕಾರದ ಆರೋಗ್ಯ ಕ್ಷೇತ್ರದ ಬಜೆಟ್ ಶೇಕಡಾವಾರು ಹೆಚ್ಚಿಸಬೇಕು ಮತ್ತು ಈ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿ ಅಗತ್ಯವಿರುವ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡಬೇಕು ಮತ್ತು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ದಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೊರಗುತ್ತಿಗೆಯಲ್ಲಿರುವ ಎಲ್ಲ ನೌಕರರಿಗೂ ಗುತ್ತಿಗೆದಾರರ ಮಧ್ಯವರ್ತಿತನವಿಲ್ಲದೇ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿ ಮಾಡಬೇಕು ಮತ್ತು ಒಳಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಗುವ ಸೌಲಭ್ಯಗಳು ಹೊರಗುತ್ತಿಗೆ ನೌಕರರಿಗೂ ಸಹ ನೀಡಬೇಕು ಎಂದು ಆಗ್ರಹಿಸಿದರು.
ಪರಸ್ಪರ ವರ್ಗಾವಣೆ ಹಾಗೂ ಖಾಲಿ ಇರುವ ಜಾಗದಲ್ಲಿ ಸಾಮಾನ್ಯ ವರ್ಗಾವಣೆಗೆ ಅವಕಾಶ ನೀಡಬೇಕು, ಖಾಯಂ ನೇಮಕಾತಿಯಾದ ಕಾರಣ ದಿಂದ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು ಮತ್ತು ಅಗತ್ಯವಾಗಿ ಸ್ಥಳ ಬದಲಾವಣೆ ಮಾಡಬಾರದು ಸೇರಿದಂತೆ ಒಟ್ಟು ೧೪ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಬೇಡಿಕೆಗಳ ಈಡೇರಿಕೆಗಾಗಿ ಅನೇಕ ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಸಹ ಸರ್ಕಾರ ಗಮನಹರಿಸದ ಕಾರಣ ಸೆ.೨೪ ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತಿದ್ದು ಇಂದಿಗೆ ೧೩ನೇ ದಿನಕ್ಕೆ ಮುಂದುವರೆದಿದೆ. ಸರ್ಕಾರದ ವಿಳಂಬ ಧೋರಣೆಯಿಂದ ನೌಕರರು ವಿಧಿಯಿಲ್ಲದೇ ಮುಷ್ಕರದ ಹಾದಿ ಹಿಡಿಯ ಬೇಕಾಗಿದ್ದು, ಬೇಡಿಕೆಗಳು ಈಡೇರದ ಹೊರತು ಮುಷ್ಕರವನ್ನು ಹಿಂಪಡೆಯು ವುದಿಲ್ಲ ಹಾಗೂ ಮುಂದಿನ ಆಗುಹೋಗುಗಳಿಗೆ ಇಲಾಖೆಯೇ ಜವಾಬ್ದಾರಿಯಾಗಿರುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಡಾ.ಹೇಮಲತಾ, ಪ್ರಮುಖರಾದ ಡಾ.ಶಂಕ್ರಪ್ಪ, ಡಾ. ಸುಪ್ರಿಯಾ, ಡಾ.ಮಹೇಶ್, ಡಾ.ರಾಘವೇಂದ್ರ ಸೇರಿದಂತೆ ೫೦ಕ್ಕೂ ವೈದ್ಯರು ಭಾಗವಹಿಸಿದ್ದರು.