ಕಸಾಪವನ್ನು ರಾಜಕೀಯ ಪಕ್ಷದ ವೇದಿಕೆ ರೀತಿ ಬಳಕೆ ವಿಕೃತ ಮನಸ್ಸಿನ ಪ್ರತೀಕ

441

ಶಿಕಾರಿಪುರ: ಕಸಾಪ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಸಾಹಿತ್ಯ ಸಾಂಸ್ಕೃತಿಕ ವೈಚಾರಿಕ ನೆಲೆಗಟ್ಟಿನಲ್ಲಿ ಸಂಸ್ಥೆಯನ್ನು ಕಟ್ಟುವ ಬದಲು ರಾಜಕೀಯ ಪಕ್ಷದ ವೇದಿಕೆ ರೀತಿ ಬಳಸಿಕೊಳ್ಳುತ್ತಿರುವುದು ವಿಕೃತ ಮನಸ್ಸಿನ ಪ್ರತೀಕವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಿ.ಮಂಜುನಾಥ್ ತೀವ್ರವಾಗಿ ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕರೋನಾ ಮಹಾಮಾರಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಮದ್ಯೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಿಷತ್ತಿನ ಕಾರ್ಯ ಚಟುವಟಿಕೆ ಯನ್ನು ವಿಸ್ತರಿಸುವ ದಿಸೆಯಲ್ಲಿ ಸ್ಪಷ್ಟವಾದ ನೀಲನಕ್ಷೆಯನ್ನು ಸಿದ್ದಪಡಿಸುತ್ತಿರುವುದಾಗಿ ಅವರು ತಿಳಿಸಿದರು.
ಕಳೆದ ೫ ವರ್ಷದಲ್ಲಿ ಪರಿಷತ್ತಿನ ಕಾರ್ಯಚಟುವಟಿಕೆಯನ್ನು ಸದಸ್ಯರು ತುಲನಾತ್ಮಕವಾಗಿ ವಿಶ್ಲೇಷಿಸುತ್ತಿದ್ದು ಸೃಜನಾತ್ಮಕ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಾರೆ ಎಂಬುದು ಮನವರಿಕೆಯಾಗಿದೆ ಎಂದು ತಿಳಿಸಿದ ಅವರು, ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕಸಾಪದಲ್ಲಿ ರಾಜಕಾರಣ, ಜಾತಿ, ಧರ್ಮದ ವಿಷಬೀಜ ಬಿತ್ತುವ ಮೂಲಕ ಸದಸ್ಯರ ಸಂವೇದನೆಯನ್ನು ಹಾಳು ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರ ಅಗತ್ಯವಿಲ್ಲದ ಕಸಾಪದಲ್ಲಿ ಕೆಲವರ ಹುನ್ನಾರದ ಬಗ್ಗೆ ಸದಸ್ಯರು ತೀವ್ರ ರೀತಿಯಲ್ಲಿ ಚಿಂತಿಸುತ್ತಿದ್ದಾರೆ ಎಂದು ತಿಳಿಸಿದರು.
೧೦೫ ವರ್ಷದ ಕಸಾಪ ಇತಿಹಾಸ ದಲ್ಲಿ ಇಂತಹ ಸವಾಲು ಎದುರಿಸಿಲ್ಲ. ೨೯ ವರ್ಷ ಸತತ ಕಸಾಪ ಕಾರ್ಯಚಟುವಟಿಕೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದು ಇದು ಪ್ರಥಮ ಅನುಭವವಾಗಿದೆ. ವಕ್ರಬುದ್ದಿ, ವಿಕೃತ ಮನಸ್ಸು ಕಸಾಪ ಘನತೆ ಗೌರವ ಹಾಳು ಮಾಡುತ್ತಿದ್ದು ಪಕ್ಷದ ವೇದಿಕೆ ರೀತಿ ಬಳಸಿಕೊಳ್ಳುತ್ತಿರುವುದು ದುರಂತವಾಗಿದೆ ಎಂದರು.
ಕಸಾಪಕ್ಕೆ ಕಳೆದ ಅವಧಿಯಲ್ಲಿ ನೀಡಿದ ಕೊಡುಗೆ ಕೊಡಬಹುದಾದ ಕೊಡುಗೆ ಬಗ್ಗೆ ಮತದಾರರ ಬಳಿ ಚರ್ಚಿಸಬೇಕು ಆರೋಗ್ಯಕರ ಪೈಪೋಟಿ ಮೂಲಕ ಚುನಾವಣೆ ಯಲ್ಲಿ ಗೆಲವು ಸಾಧಿಸಬೇಕು ಎಂದು ಸಲಹೆ ನೀಡಿದ ಅವರು, ಹಿಂದೆ ದೊರೆತ ಅವಕಾಶದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಶಿವಮೊಗ್ಗದಲ್ಲಿ ಅತ್ಯಂತ ಉನ್ನತ ಶಿಖರಪ್ರಾಯವಾಗಿ ಆಯೋಜಿಸಿದ್ದು, ಸಾಹಿತ್ಯ ಗ್ರಾಮ ಯೋಜನೆ ರೂಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರೂ.೫೦ ಲಕ್ಷ,ಯಡಿಯೂರಪ್ಪರಿಂದ ರೂ.೧ ಕೋಟಿ ಅನುದಾನದಿಂದ ೧.೨೫ ಎಕರೆ ಭೂಮಿ ಖರೀದಿಸಿ ವಿಶಾಲ ಕಟ್ಟಡ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಸಂಪೂರ್ಣ ಜಿಲ್ಲಾಧಿಕಾರಿ ,ಕನ್ನಡ ಸಂಸ್ಕೃತಿ ಇಲಾಖೆಯ ನೇತೃತ್ವದ ಪಾರದರ್ಶಕ ವ್ಯವಹಾರಕ್ಕೆ ಹಣ ದುರುಪಯೋಗ ಆರೋಪ ಹೊರಿಸುತ್ತಿರುವುದು ಹಾಸ್ಯಾಸ್ಪದ ಎಂದರು.
ನಯವಂಚಕ ಮನಸ್ಸುಗಳಿಗೆ ಪ್ರತಿಯೊಂದರಲ್ಲಿ ತಪ್ಪುಕಾಣುತ್ತಿದ್ದು, ಯೋಜನೆ ಪೂರ್ಣಗೊಳಿಸುವ ಗಡಸುತನವಿಲ್ಲದೆ ವೃಥಾ ಕಾಲಹರಣ ಮಾಡಿದ್ದಾರೆ ತೀರ್ಥಹಳ್ಳಿ, ಸಾಗರ, ಸೊರಬ, ಭದ್ರಾವತಿಯಲ್ಲಿ ಕಸಾಪ ಭವನ ಅರ್ಧಕ್ಕೆ ಸ್ಥಗಿತಗೊಂಡಿದ್ದು ಪ್ರತಿ ತಾಲೂಕು ಕೇಂದ್ರದಲ್ಲಿ ಕಸಾಪ ಭವನ ನಿರ್ಮಾಣದ ಕನಸು ನುಚ್ಚುನೂರಾಗಿದೆ ಗಿಡಗಂಟಿ ಬೆಳೆದಿದೆ ಎಂದು ವಿಷಾದಿಸಿದರು.
೫ ವರ್ಷದ ಹಿಂದಿನ ಕಸಾಪ ಕಾರ್ಯಕ್ರಮ ಪುನಃ ಕ್ರಿಯಾಶೀಲ ವಾಗಬೇಕು ಕನ್ನಡ ಕಟ್ಟುವ ಜಾತ್ಯಾತೀತ ಮನಸ್ಸುಗಳನ್ನು ಒಗ್ಗೂಡಿಸಬೇಕು ಎಂದು ಸ್ಪರ್ದಿಸಿದ್ದು ಈಗಾಗಲೇ ೯ ಸಾವಿರ ಮತದಾರ ರನ್ನು ನೇರ ಸಂಪರ್ಕಿಸಲಾಗಿದೆ. ಈ ಬಗ್ಗೆ ತೃಪ್ತಿ ಇದೆ. ಅಭಿವೃದ್ದಿ ಕಾರ್ಯದ ಜತೆಗೆ ಹೊಸ ಪೀಳಿಗೆ ಜೋಡಿಸಿಕೊಂಡು ಕಥೆ, ಕಾವ್ಯ ಕವನದ ಕಮ್ಮಟ ಸಂಗೀತ ಸಾಹಿತ್ಯ ಕಲೆಯ ಮೂಲಕ ಸಾಂಸ್ಕೃತಿಕ ನೆಲೆಗಟ್ಟಿನ ಕಸಾಪ ಕಟ್ಟುವ ಅಬಿಲಾಷೆಗೆ ಉತ್ತಮ ಸ್ಪಂದನೆ ದೊರೆತಿದೆ ಸಮಸ್ತ ಕನ್ನಡಿಗರು ಸಹಕರಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ತಾ. ಕಸಾಪ ಮಾಜಿ ಅಧ್ಯಕ್ಷ ಎಸ್.ಆರ್ ಕೃಷ್ಣಪ್ಪ, ಬಿ.ಸಿ ವೇಣುಗೋಪಾಲ್, ಕಾನೂರು ನಾಗಪ್ಪ, ಸುನೀಲ್, ಚನ್ನೇಶ್, ಜಗದೀಶ್ ಚುರ್ಚುಗುಂಡಿ, ಸೋಮಶೇಖರ ಶಿಮೊಗ್ಗಿ, ಸತ್ಯನಾರಾಯಣ, ನರಸಿಂಹಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.