ಕರ್ಫ್ಯೂ ಸಡಿಲ: ಗರಿಗೆದರಿದ ಚಟುವಟಿಕೆಗಳು

452

ಶಿವಮೊಗ್ಗ: ಪೊಲೀಸ್ ಇಲಾಖೆ ವಿಧಿಸಿದ್ದ ೧೪೪ ಸೆಕ್ಷನ್ (ಕರ್ಫ್ಯೂ)ವನ್ನು ಸಡಿಲ ಗೊಳಿಸಿದ್ದರಿಂದ ನಗರದ ಹೃದಯ ಭಾಗವಾದ ಗಾಂಧಿ ಬಜಾರ್ ಹಾಗೂ ನೆಹರೂ ರಸ್ತೆಯ ಅಂಗಡಿಗಳು ತೆರೆದು ವ್ಯಾಪಾರ ವಹಿವಾಟು ಆರಂಭಿಸಿವೆ.
ಡಿ.೩ರಂದು ಭಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ನಡೆದ ಹಲ್ಲೆಯ ಘಟನೆಯಿಂದ ನಿನ್ನೆಯವರೆಗೂ ನಗರದ ನಿಷೇಧಾeಯಲ್ಲದೆ ಅಘೋಷಿತ ಕರ್ಫ್ಯೂವನ್ನು ದೊಡ್ಡಪೇಟೆ, ಕೋಟೆ ಹಾಗೂ ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಹಾಕಲಾಗಿತ್ತು.
ಇದರಿಂದ ಈ ಭಾಗದ ಯಾವುದೇ ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿರಲಿಲ್ಲ. ಅಲ್ಲದೆ ಉಳಿದ ಭಾಗ ದಲ್ಲೂ ನಿಷೇಧಾe ಹಿನ್ನೆಲೆ ಅಂಗಡಿಗಳನ್ನು ಮುಚ್ಚಿಸಲಾಗಿತ್ತು.
ನಗರದಲ್ಲಿ ಪರಿಸ್ಥಿತಿ ತಿಳಿಯಾಗಿದ್ದರೂ ನಿಷೇಧಾeಯನ್ನು ಪೊಲೀಸ್ ಇಲಾಖೆ ಮುಂದುವರೆಸುತ್ತ ಬಂದಿದ್ದನ್ನು ವಿರೋಧಿಸಿ ನಿನ್ನೆ ವಾಣಿಜ್ಯ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವಂತೆ ಮಾಡಿದ ಮನವಿಗೆ ಇಂದು ಜಿಲ್ಲಾಡಳಿತ ಸ್ಪಂದಿಸಿದೆ.
ಡಿ.೧೨ರವರೆಗೆ ನಗರದಲ್ಲಿ ನಿಷೇಧಾe ಜಾರಿಯಾಲ್ಲಿದ್ದರೂ, ಬೆಳಿಗ್ಗೆ ೬ರಿಂದ ಸಂಜೆ ೬ ಗಂಟೆವರೆಗೆ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಸಂಜೆ ೬ರಿಂದ ಬೆಳಿಗ್ಗೆ ೬ರವರೆಗೆ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಮಧ್ಯದಂಗಡಿಗಳನ್ನು ಬೆಳಿಗ್ಗೆ ೧೦ ರಿಂದ ಸಂಜೆ ೪ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಇದರಿಂದಾಗಿ ಇಂದು ಬಹುತೇಕ ಎಲ್ಲಾ ಅಂಗಡಿಗಳನ್ನು ತೆರೆದು ವಹಿವಾಟ ನಡೆಸಲಾಯಿತು. ನೆಹರೂ ರಸ್ತೆ ಮತ್ತು ಗಾಂಧಿ ಬಜಾರ್ ಎಂದಿನಂತೆ ಜನಜಂಗುಳಿಯಿಂದ ಕಳೆಕಟ್ಟಿದವು.
ನಗರದ ಜನತೆಯಲ್ಲದೆ ಬೇರೆ ಊರುಗಳಿಂದ ಬಂದ ಜನರು ಸಹ ಎಂದಿನಂತೆ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದರು.
ಪ್ರಕ್ಷುಬ್ದ ವಾತಾವರಣವೇ ಇಲ್ಲದ ದುರ್ಗಿಗುಡಿ ಹಾಗೂ ವಿನೋಬ ನಗರದ ಭಾಗದಲ್ಲೂ ಕಳೆದ ಒಂದು ವಾರ ಸರಿಯಾಗಿ ಅಂಗಡಿಗಳನ್ನು ತೆರೆ ಯಲು ಬಿಟ್ಟಿರಲಿಲ್ಲ. ಆದರೆ ಇಂದು ಎಲ್ಲರೂ ವಹಿವಾಟು ನಡೆಸಿದ್ದಾರೆ.
ಅದರಲ್ಲೂ ಹೋಟೆಲ್‌ಗಳು, ಕ್ಯಾಂಟಿನ್‌ಗಳು ತೆರೆಯಲ್ಪಟ್ಟಿದ್ದು ಜನರಿಗೆ ಅನುಕೂಲವಾಗಿತ್ತು. ಬೀದಿ ಬದಿ ವ್ಯಾಪಾರವೂ ನಡೆಯಿತು.
ದೊಡ್ಡಪೇಟೆ, ಕೋಟೆ ಹಾಗೂ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಸಂಜೆ ಅಂಗಡಿಗಳು ಮುಚ್ಚುವುದು ಡಿ.೧೨ರವರೆಗೆ ಅನಿವಾರ್ಯವಾಗಿದೆ.
ಇಂದು ನಗರದಲ್ಲಿ ಸರ್ಕಾರಿ ಬಸ್‌ಗಳೊಂದಿಗೆ ಖಾಸಗಿ ನಗರ ಸಾರಿಗೆ ಬಸ್‌ಗಳು ಎಲ್ಲೆಡೆ ಸುಗಮವಾಗಿ ಸಂಚರಿಸುತ್ತಿದ್ದದ್ದು ಕಂಡುಬಂತು.