ಐದು ಸುತ್ತಿನ ಕೋಟೆಯ ಬುರಜು ಮಾಸಡಿ

475

ಲೇಖನ: ರವಿಕುಮಾರ್ ಹೆಚ್.ಈ.
ಉಪನ್ಯಾಸಕರು.
ನಮ್ಮ ಸುತ್ತಲಿನ ಪರಿಸರದಲ್ಲಿನ ಇತಿಹಾಸ ಪರಂಪರೆ ಪುರಾತತ್ವ ಬಗ್ಗೆ ಅರಿವು ಇರಲಿ. ಏಕೆಂದರೆ ನಮ್ಮ ನಾಡನ್ನು ಅನೇಕ ರಾಜರು-ರಾಣಿಯರು, ದೊರೆಗಳು, ನಾಯಕರು, ಆಳ್ವಿಕೆ ಮಾಡುವ ಮೂಲಕ ಐತಿಹಾಸಿಕವಾಗಿರುವಂತ ಕೋಟೆ ಕೊತ್ತಲು ಬುರುಜು ಪ್ರಾಚ್ಯ ವಸ್ತುಗಳು, ಶಿಲ್ಪಗಳು, ಮಹಾಸತಿ ವೀರಗಲ್ಲು, ಶಾಸನಗಳು, ಕಾಡು ಪೊದೆಗಳಲ್ಲಿ ಹುದುಗಿ ಹೋಗಿವೆ ಅವುಗಳನ್ನು ಉತ್ಖನನ ಮಾಡಿ ಸಂರಕ್ಷಣೆ ಮಾಡುವ ಕಾರ್ಯ ಪ್ರತಿಯೊಬ್ಬರು ನಿರ್ವಹಿಸಬೇಕಾಗಿದೆ.
ಪ್ರಸ್ತುತವಾಗಿ ಇರುವಂತಹ ನನ್ನ ಲೇಖನವು ದಾವಣಗೆರೆ ಜಿ ಹೊನ್ನಾಳಿ ತಾಲೂಕಿನ ಮಾಸಡಿಯ ಐದು ಸುತ್ತಿನ ಕೋಟೆಯ ಬುರುಜು ಕುರಿತು ಇತಿಹಾಸದ ಲೇಖನವನ್ನು ತಾಲೂಕಿನ ಓದುಗರಿಗೆ ತಿಳಿಸುವಲ್ಲಿ ಕಾರ್ಯ ಚೇತನವಾಗಿದೆ.
ಮಹಾಸತಿಯೇ ಮಾಸಡಿ:
ಹೊನ್ನಾಳಿ ತಾಲೂಕಿನಲ್ಲಿ ಸುಮಾರು ೧೭೫ಕ್ಕಿಂತ ಹೆಚ್ಚು ಹಳ್ಳಿಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಹಳ್ಳಿಯೂ ತನ್ನದೆಯಾದ ಐತಿಹಾಸಿಕ ಪರಂಪರೆ ಮತ್ತು ಇತಿಹಾಸವನ್ನು ಹೊಂದಿದೆ. ಹಾಗೆಯೇ ಮಾಸಡಿ ಕ್ಷೇತ್ರ ಕೂಡ ಮಹಾಸತಿ ಎಂದರೆ ಯುದ್ಧವಾದಾಗ, ರಾಜ ಮಡಿದಾಗ, ತನ್ನ ಹೆಂಡತಿ ಸಹಗಮನ ಮಾಡುವ ಪರಂಪರೆ ಇತ್ತು.
ವಿಶೇಷವಾಗಿ ರಾಜರಂಗಪ್ಪ ನಾಯಕ ತರಿಕೇರಿ ಸಂಸ್ಥಾನದ ಅಡಿಯಲ್ಲಿ ವೀರ ಸೇನಾಧಿಕಾರಿ ಅಥವಾ ವೀರಸೇನಾಪತಿ ಪಾಳೆಗಾರರು ವೀರಮರಣ ಹೊಂದಿದಾಗ ಅವರ ನೆನಪಿಗಾಗಿ ಮಹಾಸತಿಕಲ್ಲು ನಡೆಸುತ್ತಿದ್ದರು.
ವೀರಮರಣ ಹೊಂದಿದ ಸ್ಥಳದಲ್ಲಿ ಈಶ್ವರಲಿಂಗ ಸ್ಥಾಪನೆ ಮಾಡುತ್ತಿದ್ದರು. ಹಾಗೆ ರಾಣಿಯರು ಮರಣ ಹೊಂದಿದಾಗ ಮಹಾಸತಿ ಕಲ್ಲುಗಳನ್ನು ನಡೆಸುವಂಥದ್ದು. ಹಾಗೆ ಮಹಾಸತಿ ವಂಶಸ್ಥರು ಹಾಗೂ ವೀರನ ವಂಶಸ್ಥರನ್ನು ದೇವರ ರೀತಿಯಲ್ಲಿ ಕಾಣುವ ಪ್ರಸಂಗ ಮಾಸಡಿ ಗ್ರಾಮದಲ್ಲಿ ಉಖವಾಗಿತ್ತು. ಇಂದಿಗೂ ಕೂಡ ಮಹಾಸತಿ ವಂಶಸ್ಥರು ಹಿರೇಕೆರೂರು ತಾಲೂಕಿನ ಕಮಲಾಪುರದಲ್ಲಿ ಅಂಗಡಿ ಈರಣ್ಣ ಎಂಬ ಕುಟುಂಬ ಪ್ರತಿವರ್ಷ ಮಾಸಡಿ ಗ್ರಾಮಕ್ಕೆ ಬಂದು ದೇವಸ್ಥಾನದ ಹರಕೆ ಆಚರಣೆ ಪಂಚ ಸೂತ್ರಗಳನ್ನು ಅಳವಡಿಸಿಕೊಂಡು ರೂಢಿ ಸಂಪ್ರದಾಯಗಳನ್ನು ಮಾಸಡಿ ವಂಶಸ್ಥರು ನೀಡುವಂತ ಕಾರ್ಯವಾಗಿದೆ ಎನ್ನುವಂಥ ಸಂಕ್ಷಿಪ್ತವಾದ ವಿಚಾರವನ್ನು ಖ್ಯಾತ ವಕೀಲ ಮಂಜುನಾಥ .ಕೆ. ಆರ್. ಮಾಸಡಿಯ ಇತಿಹಾಸದ ತಿರುಳನ್ನು ಹಂಚಿಕೊಂಡರು.
ಐದು ಸುತ್ತಿನ ಕೋಟೆಯ ವೈಶಿಷ್ಟತೆ:
ಕೋಟೆಯನ್ನು ನಾವು ರಕ್ಷಣೆ ಮಾಡಿದರೆ ಕೋಟೆ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬ ನುಡಿಯಂತೆ ಕೆಳದಿ, ತರೀಕೆರೆ ಪಾಳೇಗಾರರಿಂದ ಬಸವಾಪಟ್ಟಣದ ಪಾಳ್ಳೇಗಾರರವರಿಗೆ ಸಾಮಾನ್ಯ ಶಕ೧೨೦೦ ಅಧೀನದಲ್ಲಿ ಐದು ಸುತ್ತಿನ ಕೋಟೆಯ ಬುರುಜು ಮಾಸಡಿಯಲ್ಲಿ ನಿರ್ಮಿತವಾಯಿತು.
ಈ ಕೋಟೆಯ ವೈಶಿಷ್ಟತೆ ಪಶ್ಚಿಮ ದಿಕ್ಕಿಗೆ ಗುಪ್ತದ್ವಾರವಿದೆ. ಇದು ಕೋಟೆಯ ಒಳಗೆ ಹೋಗಲು ಹಾಗೆ ಉತ್ತರದಿಕ್ಕಿಗೆ ಗುಪ್ತ ಸುರಂಗ ಮಾರ್ಗವಿದೆ. ಇದು ವಿಶೇಷವಾಗಿ ರಜಕೋರರು ಹೈದರಾಲಿ ಆದಿಲ್ ಶಾಹಿಗಳು ಷಹಜಿ ಇವರಿಂದ ತಪ್ಪಿಸಿಕೊಳ್ಳಲು ಸುರಂಗ ಮಾರ್ಗದ ಮೂಲಕ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುತ್ತಿದ್ದರು. ದಕ್ಷಿಣ ದಿಕ್ಕಿಗೆ ರಾಜ ಮಾರ್ಗವಿದೆ ಎಂಬ ಉಖವಿದೆ.
ಒಂದನೇ ಹಂತದ ಕೋಟೆಯ ಬುರುಜುನಲ್ಲಿ ಕೋಟೆಯನ್ನು ಸಂರಕ್ಷಣೆ ಮಾಡುವ ಸೇನಾಧಿಪತಿಗಳು ಸೈನಿಕರು ಇರುತ್ತಿದ್ದರು. ಎರಡನೇ ಹಂತದಲ್ಲಿ ಹಗೇವು ದವಸಧಾನ್ಯಗಳನ್ನು ಪಶು ಆಹಾರಗಳನ್ನು ಸಂರಕ್ಷಣೆ ಮಾಡುತ್ತಿದ್ದರು. ಮೂರನೇ ಹಂತದಲ್ಲಿ ಕೋಟೆಯ ಬುರುಜಿನ ಸುತ್ತಲು ನೀರಿನ ಮಟ್ಟವಿತ್ತು ಸೈನಿಕರು ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಲು ನೀರಿನಲ್ಲಿ ಬೀಳುತ್ತಿದ್ದರು. ನಾಲ್ಕನೇ ಹಂತದಲ್ಲಿ ಶತ್ರುಗಳಿಗೆ ಸೈನಿಕರು ಫಿರಂಗಿ ನಡೆಸುತ್ತಿದ್ದರು. ಐದನೇ ಹಂತದಲ್ಲಿ ನಾಗತಿಯರಿಗೆ, ರಾಣಿಯರಿಗೆ ಗುಪ್ತ ಮನೆಯಿತ್ತು.
ವಿಶೇಷವಾಗಿ ಮಾಸಡಿಯ ಮುಖ್ಯ ಆಡಳಿತ ಕೇಂದ್ರವು ಹನುಮನಹಳ್ಳಿಯಿಂದ ಬಸವಾಪಟ್ಟಣ ದವರೆಗೆ ಸವಿಸ್ತಾರವಾದ ಕೋಟೆ ಉಖಿತವಾಗಿದೆ. ಆದರೆ ಇಂದು ಜನಸಂಖ್ಯೆ ಅನುಗುಣವಾಗಿ ಕೋಟೆಯ ಸಾಮ್ರಾಜ್ಯದ ವಿಸ್ತರಣೆ ಅವನತಿ ಕಂಡುಕೊಳ್ಳುವ ಮೂಲಕ ಮಾಸಡಿಯಲ್ಲಿ ಐದು ಸುತ್ತಿನ ಕೋಟೆ ಬುರುಜು ಅವಶೇಷ ಮಾತ್ರ ಉಳಿದಿದೆ. ಅದನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಭಾರತೀಯ ಪುರಾತತ್ವ ಇಲಾಖೆ, ಪ್ರಾಚ್ಯವಶೇಷಗಳ ಇಲಾಖೆ ಸ್ಥಳೀಯವಾಗಿ ಇರುವಂತ ಕೋಟೆ ಕೊತ್ತಲು ಬುರುಜುಗಳ ಇತಿಹಾಸವನ್ನು ಗತಕಾಲದ ಇತಿಹಾಸವನ್ನು ಮುಂದಿನ ಪೀಳಿಗೆ ಯುವಜನಾಂಗಕ್ಕೆ ಇಂತಹ ಅವಶೇಷಗಳನ್ನು ದಾಖಲೆಗಳ ರೂಪದಲ್ಲಿ ಹಾಗೂ ಮಾಸಡಿ ಐತಿಹಾಸಿಕ ಕೋಟೆಯ ಬುರುಜುಗಳುಳ್ಳ ಅವಶೇಷಗಳನ್ನು ಹೊನ್ನಾಳಿ ತಾಲೂಕಿನ ಪ್ರವಾಸಿ ತಾಣವನ್ನಾಗಿ ನಿರ್ಮಿಸಲು ಬೇಕಾಗಿರುವ ಮೂಲಸೌಲಭ್ಯಗಳು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಇತ್ತಕಡೆ ಗಮನ ಹರಿಸಿದಾಗ ಮಾತ್ರ ಇತಿಹಾಸದ ಪರಂಪರೆಯ ಕೋಟೆ ಕೊತ್ತಲು ಬುರುಜು ಸಂರಕ್ಷಣೆ ಮಾಡಲು ಸಹಾಯಕವಾಗುತ್ತದೆ ಎಂಬುದು ಈ ನಾಡಿನ ಜನತೆಗೆ ಈ ಲೇಖನವನ್ನು ತಿಳಿಸುವಲ್ಲಿ ಅತ್ಯಂತ ಸಂತೋಷದಾಯಕವಾಗಿದೆ.