ಉದ್ಯೋಗ ಸೃಷ್ಠಿಯಲ್ಲಿ ಫೇಲಾದ ಮೋದಿ ಸರ್ಕಾರ…

375

ಶಿವಮೊಗ್ಗ: ವಿದ್ಯಾವಂತ ಯುವಜನತೆಗೆ ಉದ್ಯೋಗ ಸೃಷ್ಠಿಸುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಎನ್‌ಎಸ್‌ಯುಐ ಕಾರ್ಯಕರ್ತರು ನಗರದ ಮಹಾವೀರ ವೃತ್ತದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಇಂಜಿನಿಯರಿಂಗ್, ಬಿಕಾಂ, ಡಿಪ್ಲೋಮಾ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಉದ್ಯೋಗವಿಲ್ಲದೆ ದಿನ ಪತ್ರಿಕೆ ಮಾರುವುದು, ಟೀ ಮಾರುವುದು, ಮಾಸ್ಕ್ ಮಾರುವುದು ಸೇರಿದಂತೆ ಇತರೆ ರೀತಿಯ ಅಣಕು ಪ್ರದರ್ಶನ ಮಾಡುತ್ತಾ ಯುವ ಜನತೆಯ ಉದ್ಯೋಗ ಸಮಸ್ಯೆಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋಗಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಠಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ವಿದ್ಯಾವಂತ ಯುವಜನತೆಗೆ ಉದ್ಯೋಗ ನೀಡುವಲ್ಲಿ ಯಾವುದೇ ರೀತಿ ಪರಿಣಾಮಕಾರಿ ನಿರ್ಧಾರಗಳನ್ನು ಇದುವರೆಗೂ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಪ್ರಸ್ತುತ ಉದ್ಯೋಗ ಸೃಷ್ಠಿಸುವ ಕೆಲಸ ಮಾಡಲಿಲ್ಲ. ಅಲ್ಲದೇ ಈ ವರ್ಷದಲ್ಲಿ ಕೋವಿಡ್ ಕಾರಣಕ್ಕೆ ಲಕ್ಷಾಂತರ ಯುವ ಉದ್ಯೋಗಿಗಳು ಕೆಲಸ ಕಳೆದುಕೊಂಡರು. ನೂರಾರು ಕಂಪನಿಗಳು ಬಾಗಿಲು ಮುಚ್ಚಿದವು. ಇದರಿಂದ ದೇಶದ ಯುವ ಉದ್ಯೋಗಿಗಳು ಮತ್ತಷ್ಟು ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡರು ಎಂದು ದೂರಿದರು. ಯುವ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಠಿಸುವಲ್ಲಿ ವಿಫಲವಾಗಿ ರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಟೀ, ಮಾಸ್ಕ್, ಪೇಪರ್ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತ ತಮ್ಮ ಆಕ್ರೋಶವನ್ನು ವಿಭಿನ್ನ, ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಶ್ರೀಜಿತ್ ಯುವ ಕಾಂಗ್ರೇಸ್ ಕಾರ್ಯಾಧ್ಯಕ್ಷ ಮಧುಸೂಧನ್ ಜಿಲ್ಲಾಧ್ಯಕ್ಷ ಎಚ್.ಎಸ್.ಬಾಲಾಜಿ, ವಿನಯ್ ವಿಜಯ್, ರವಿ, ವಿನ್ಯಾಸ್, ಮಂಜು ಪುರಲೆ, ಅಬ್ದುಲ್ ಸತ್ತರ, ಗಿರೀಶ್, ಶಿವು, ಭರತ್, ಸಂದೀಪ್, ಪ್ರಮೋದ್, ಆಕಾಶ್, ರವಿ, ಹೇಮಂತ್, ಸಂಜಯ್ ಇದ್ದರು.