ಇಂದು ಬೆಳ್ಳಂಬೆಳಿಗ್ಗೆ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಜನವೋಜನ.

510

ಶಿವಮೊಗ್ಗ,ಮಾ.೨೪: ಇಂದು ಬೆಳ್ಳಂಬೆಳಿಗ್ಗೆ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಜನವೋಜನ. ಹಬ್ಬದ ಹಿನ್ನಲೆಯಲ್ಲಿ ಮತ್ತು ಕರೊನಾ ಕರ್ಫ್ಯೂ ಹಿನ್ನಲೆಯಲ್ಲಿ ಜನರು ತರಕಾರಿ ಕೊಳ್ಳಲು ತಾ ಮುಂದು ನಾ ಮುಂದು ಎನ್ನುವಂತೆ ಮುನ್ನುಗ್ಗಿದ್ದರು. ಪೊಲೀಸರಿಗೆ ಇದನ್ನು ತಡೆಯುವುದೇ ಕಷ್ಟವಾಗಿ ಕೊನೆಗೆ ಲಘುಲಾಠಿ ಪ್ರಹಾರದ ಮೂಲಕ ಜನರನ್ನು ಚದುರಿಸಿದರು.

ಇಡೀ ರಾಜ್ಯದಲ್ಲಿಯೇ ಕರ್ಫ್ಯೂ ಲಾಕ್‌ಡೌನ್ ಮಾಡಲಾಗಿದೆ. ಜೊತೆಗೆ ೧೪೪ ಸೆಕ್ಷನ್ ಕೂಡಾ ಜಾರಿ ಮಾಡಲಾಗಿದೆ. ಆದರೂ ಕೂಡ ಇದನ್ನು ಲೆಕ್ಕಿಸದೇ ಜನರು ತರಕಾರಿ ಕೊಳ್ಳಲು ನೂಕು ನುಗ್ಗಲು ಉಂಟು ಮಾಡಿದ್ದರು. ಜೊತೆಗೆ ಒಂದು ವಾರ ತರಕಾರಿ ಮಾರಾಟ ಇರುವುದಿಲ್ಲ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಂದ ಸುದ್ದಿ ಕೂಡ ಜನರನ್ನು ಒಟ್ಟಿಗೆ ಸೇರಿಸಲು ಕಾರಣವಾಗಿತ್ತು.

ತರಕಾರಿ ಮಾರಾಟಗಾರರು ಕೂಡ ಇದೇ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬೆಲೆಯನ್ನು ಹೆಚ್ಚು ಮಾಡಿದ್ದರು.  ನುಗ್ಗೆಕಾಯಿ ೨೦ ರೂ.ಗೆ ಶನಿವಾರ ಸಿಕ್ಕಿದ್ದು, ಇವತ್ತು ೮೦ ರೂ. ದಾಟಿತ್ತು. ಬೆಂಡೆಕಾಯಿ, ಬದನೆ, ಬೀಟ್‌ರೋಟ್, ಬೀನ್ಸ್ ಮುಂತಾದವುಗಳು ೫೦ ರೂ. ದಾಟಿದ್ದವು. ೨೦ ರೂ.ಗೆ ಸಿಗುತ್ತಿದ್ದು, ಹಸಿಮೆಣಸಿನಕಾಯಿ ಇಂದು ೬೦ ರೂ. ಮುಟ್ಟಿತ್ತು. ಜೊತೆಗೆ ಸೊಪ್ಪಿನ ಬೆಲೆಕೂಡ ಗಗನಕ್ಕೇರಿತ್ತು. ಟೊಮೋಟೊ ಬೆಲೆ ೧೦ ರೂ. ಇದ್ದದ್ದು ಇಂದು ೩೦ ರೂ.ವರೆಗೆ ಮಾರಾಟವಾಯಿತು. ಈರುಳ್ಳಿ ೨೦ ರೂ.ಗೆ ಸಿಗುತ್ತಿದ್ದುದ್ದು ಇಂದು ೩೦ ರೂ. ಏರಿತ್ತು. ಬೆಳ್ಳುಳ್ಳಿ ೩೦ ರೂ.ಗೆ ಕಾಲು ಕೆ.ಜಿ. ಇದ್ದದ್ದು ೪೦ ರೂ. ಮುಟ್ಟಿತ್ತು.

ಹೀಗಾದರೂ ಕೂಡ ಜನರು ಬೆಲೆಯನ್ನು ಲೆಕ್ಕಿಸದೇ ಚೌಕಾಸಿ ಮಾಡದೇ ದೊಡ್ಡ ದೊಡ್ಡ ಬ್ಯಾಗುಗಳಲ್ಲಿ ಕನಿಷ್ಠ ೧೫ ದಿನಕ್ಕೆ ಆಗುವಷ್ಟು ತರಕಾರಿ ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು. ಜನಮರುಳೋ ಜಾತ್ರೆ ಮರುಳೋ ಎಂಬಂತೆ ಇನ್ನೇನು ತರಕಾರಿಯೇ ಸಿಗುವುದಿಲ್ಲ ಎಂಬ ಭ್ರಮೆಯಲ್ಲಿ ಮುಳುಗಿದ್ದ ಜನರು ಯಾವ ಕರೊನಾ ವೈರಸ್‌ನ ಒಂಚೂರು ಭಯವಿಲ್ಲದೇ ಸಾಗರ ರೂಪದಲ್ಲಿ ಜನ ಸೇರಿದ್ದ ಇಂದು ಕಂಡು ಬಂದಿತು.

ಈ ಜನ ಸೇರಿರುವ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರವಾಗಿದ್ದೇ ತಡ ತಹಶೀಲ್ದಾರ್ ಸೇರಿದಂತೆ ಪೊಲೀಸ್ ವ್ಯಾನುಗಳು ಸೈರನ್ ಕೂಗಿಕೊಂಡು ಓಡೋಡಿ ಬಂದವು. ಕರೊನಾಕ್ಕೆ ಹೆದರದ ಜನ ಸೈರನ್‌ಗೆ ಹೆದರುತ್ತಾರೆಯೇ ಪೊಲೀಸ್ ವಾಹನಗಳ ಸೈರನ್ ಕೂಗಿ ಎಚ್ಚರಿಸಿದರೂ ಕೂಡ ಜನರು ಕದಡಲೇ ಇಲ್ಲ. ಮೊದಲು ಪೊಲೀಸರು ಚದುರುವಂತೆ ಮನವಿ ಮಾಡಿದರು. ಈ ಮನವಿಗೂ ಜಗ್ಗಲಿಲ್ಲ. ಬದಲು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಮಾತಿನ ಚಕಮಕಿ ಕೂಡ ನಡೆಯಿತು. ಪೊಲೀಸರು ಜನರನ್ನು ಚದುರಿಸುವುದೇ ಕಷ್ಟ ಎಂದು ತಿಳಿದಾಗ ಅನಿವಾರ್‍ಯವಾಗಿ ಲಘು ಲಾಠಿ ಪ್ರಹಾರ ಮಾಡಿದರು. ಎಪಿಎಂಸಿಯ ಮುಖ್ಯದ್ವಾರಗಳನ್ನು ಬಂದ್ ಮಾಡಿದರು. ಪಾರ್ಕಿಂಗ್ ಮಾಡಿದ್ದ ವಾಹನಗಳನ್ನು ಬಲವಂತವಾಗಿ ತೆಗೆಸುತ್ತಿದ್ದರು. ಅಕ್ಕಪಕ್ಕ ಇದ್ದ ಅಂಗಡಿಗಳನ್ನು ಕೂಡ ಮುಚ್ಚಿಸಿದರು. ನಿಧಾನವಾಗಿ ಜನ ಚದುರಿದರು.

ಮನೆಯಿಂದ ಹೊರ ಬರಬಾರದು ಅಗತ್ಯವಿದ್ದರೆ ಮಾತ್ರ ಬನ್ನಿ ಎಂದಿದ್ದರೂ ಕೂಡ ಜನರು ಮಾತ್ರ ಮನೆಯಿಂದ ಹೊರಗೆ ಇದ್ದದ್ದು ಬೆಳಗಿನ ಮಾರುಕಟ್ಟೆಯಲ್ಲಿ ಕಂಡು ಬಂದಿತು. ಯಾವುದೇ ಮಾಸ್ಕ್ ಧರಿಸಿರಲಿಲ್ಲ. ಬೆರಳೆಣಿಕೆಯಷ್ಟು ಜನರು ಮಾತ್ರ ಧರಿಸಿದ್ದದು ಕಂಡು ಬಂದಿತು.