ಆಸ್ಪತ್ರೆ ಕಚೇರಿಯಲ್ಲೇ ಡಾ. ರತ್ನಾಕರ್ ರಂಗಿನಾಟ: ವಿಡಿಯೋ ವೈರಲ್

64
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯ ಕಾಮಪುರಾಣವೊಂದು ಇದೀಗ ಬಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಕುಷ್ಠ ರೋಗ ಮತ್ತು ಆಯುಷ್ಮಾನ್ ನೋಡೆಲ್ ಆಫೀಸರ್ ಆಗಿರುವ ಡಾ. ರತ್ನಾಕರ್ ಕಚೇರಿಯ ಮಹಿಳಾ ಸಿಬ್ಬಂದಿಯೊಂದಿಗೆ ಬಹಿರಂಗವಾಗಿಯೇ ರಂಗಿನಾಟ ವಾಡಿದ್ದಾನೆ ಎಂದು ವರದಿಯಾಗಿದೆ.
ವೈದ್ಯನ ಕಾಮಪುರಾಣದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿದ್ದು, ಡಾ. ರತ್ನಾಕರ್‌ರನ್ನು ಅಮಾನತು ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ರತ್ನಾಕರ್ ಹಿನ್ನಲೆ:
ಮೂಲತಃ ಉಡುಪಿ ಜಿಲ್ಲೆಯವರಾದ ಡಾ. ರತ್ನಾಕರ್ ಕಳೆದ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದು, ಆಯುಷ್ಮಾನ್ ಇಲಾಖೆ ಮತ್ತು ಕುಷ್ಠ ರೋಗ ವಿಭಾಗದ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಹಾಗೂ ತನ್ನ ಕಚೇರಿಯ ಮಹಿಳಾ ಸಹೋದ್ಯೋಗಿಗಳ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದಾರೆ.
ಮಾನಸಿಕ ಆರೋಗ್ಯ ಕಾರ್ಯಕ್ರಮದ ಕಚೇರಿಯಲ್ಲೇ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸುವುದು, ಕಾಲು ಒತ್ತಿಸಿಕೊಳ್ಳು ವುದು ಮುಂತಾದ ಕೆಲಸಗಳನ್ನು ಮಾಡಿಸುತ್ತಿದ್ದರು ಎನ್ನಲಾಗಿದೆ. ಒಂದು ವೇಳೆ ಯಾರಾದರೂ ಪ್ರತಿರೋಧ ಮಾಡಿದರೆ ಅವರನ್ನು ಕೆಲಸದಿಂದ ತೆಗೆಯುವ, ಟ್ರಾನ್ಸ್‌ಫರ್ ಮಾಡುವ ಬೆದರಿಕೆಯನ್ನು ಹಾಕಿಕುತ್ತಿದ್ದ ಎಂದು ತಿಳಿದು ಬಂದಿದೆ.
ಆಸ್ಪತ್ರೆಯ ೯ ಮಂದಿ ಮಹಿಳಾ ಸಿಬ್ಬಂದಿ ಜೊತೆಗೆ ರತ್ನಾಕರ್ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ತೊಡೆ ಮೇಲೆ ಇಬ್ಬರು ಮಹಿಳೆಯರನ್ನು ಕೂರಿಸಿಕೊಂಡಿದ್ದಾನೆ. ಮಹಿಳಾ ಸಿಬ್ಬಂದಿ ಮೂಲಕ ರತ್ನಾಕರ್ ಪಾದ ಸೇವೆ ಮಾಡಿಸಿಕೊಂಡಿದ್ದಾನೆ. ಇಬ್ಬಿಬ್ಬರು ಮಹಿಳಾ ಸಿಬ್ಬಂದಿಯನ್ನು ಕೂರಿಸಿಕೊಂಡು ರತ್ನಾಕರ್ ಆಸ್ಪತ್ರೆ ಯಲ್ಲಿಯೇ ರಂಗಿನಾಟ ಆಡಿದ್ದಾನೆ. ಅಲ್ಲದೇ ಆಸ್ಪತ್ರೆ ಕಚೇರಿಯಲ್ಲೇ ಡ್ಯಾನ್ಸ್ ಮಾಡಿದ್ದಾನೆ. ಈ ಎಲ್ಲಾ ವಿಡಿಯೋ ಗಳು ಈಗ ಬಟಾ ಬಯಲಾಗಿದೆ.
ಸರ್ಕಾರಿ ವೈದ್ಯನಾಗಿರುವ ರತ್ನಾಕರ್ ಆಯುಷ್ಮಾನ್ ನೋಡಲ್ ಆಫೀಸರ್ ಕೂಡ ಹೌದು. ಒಂದು ವೇಳೆ ರತ್ನಾಕರ್ ಜೊತೆಗೆ ಸಹಕರಿಸದ ಸಿಬ್ಬಂದಿಯನ್ನು ಕೆಲಸದಿಂದ ತೆಗೆಸುವ ಅಥವಾ ಟ್ರಾನ್ಸ್‌ಫರ್ ಮಾಡಿಸುವ ಹೀಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ. ಈ ಭಯಕ್ಕೆ ಮಹಿಳಾ ಸಿಬ್ಬಂದಿ ಆತ ಹೇಳಿದಂತೆ ಕೇಳುತ್ತಿದ್ದರು ಎಂದು ಹೇಳಲಾಗಿದೆ.
ರತ್ನಾಕರ್ ಮೇಲೆ ಈ ಹಿಂದೆ ಕೂಡಾ ಇಂತಹ ಆರೋಪಗಳು ಕೇಳಿಬಂದಿತ್ತು. ಇದೇ ವಿಚಾರವಾಗಿ ವರ್ಗಾವಣೆ ಶಿಕ್ಷೆಯನ್ನೂ ಅನುಭವಿಸಿ ದ್ದಾನೆ. ಮಂಗಳೂರಿನಲ್ಲಿ ಕೂಡಾ ಅದೇ ಅಭ್ಯಾಸವನ್ನು ಮುಂದುವರಿಸಿದ್ದ. ವೆನ್‌ಲಾಕ್ ಆಸ್ಪತ್ರೆ ಬಳಿ ಇರುವ ಮಾನಸಿಕ ಆರೋಗ್ಯ ಕಾರ್ಯಕ್ರಮ ಕಚೇರಿಯಲ್ಲಿದ್ದ ವೇಳೆ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವಾಗಿ ವರ್ತಿಸಿದ್ದ. ರತ್ನಾಕರ್ ಕಚೇರಿ ಯಲ್ಲಿ ಒಟ್ಟು ೧೨ ಮಂದಿ ಮಹಿಳಾ ಸಿಬ್ಬಂದಿಯಿದ್ದು, ೯ ಮಂದಿಯ ಜೊತೆ ಅಸಭ್ಯ ವರ್ತನೆ ಮಾಡುತ್ತಿದ್ದ. ಕಚೇರಿಯಲ್ಲಿ ಈತನ ರಂಗಿನಾಟ ಸಹಿಸಲಾರದೇ ಮಹಿಳೆಯೊಬ್ಬರು ವಿಡಿಯೋ ಮಾಡಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ನ. ೩ರಂದು ದೂರು ಬಂದಿದ್ದು, ದೂರು ಆಧರಿಸಿ, ಹಿರಿಯ ವೈದ್ಯಾಧಿಕಾರಿಯಿಂದ ತನಿಖೆ ನಡೆಸಿದ ನಂತರ ಸರ್ಕಾರಕ್ಕೆ ವರದಿ ಕಳುಹಿಸಿ, ಸರ್ಕಾರದ ಆದೇಶದಂತೆ ನ.೮ರಿಂದ ಅಮಾನತು ಮಾಡಲಾಗಿದೆ.
ಅಲ್ಲದೇ ಈತ ಮಹಿಳಾ ಸಿಬ್ಬಂದಿಗೆ ಎರಡು ದಿನಗಳಿಗೊಮ್ಮೆ ಭರ್ಜರಿ ಔತಣಕೂಟವನ್ನೂ ನೀಡುತ್ತಿದ್ದ. ಮಂಗಳೂರಿನ ಪ್ರಸಿದ್ಧ ಹೋಟೆಲ್ ಗಳಲ್ಲಿ ಔತಣಕೂಟ ನೀಡಿ ಅದರ ಬಿಲ್ ಅನ್ನು ಇಲಾಖೆಯ ಹೆಸರಿಗೆ ಬರೆಸಿ ಸರ್ಕಾರದಿಂದ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಡಾ.ರತ್ನಾಕರ್ ಬಗ್ಗೆ ಈ ಹಿಂದೆ ಆರೋಪಿಗಳು ಕೇಳಿಬಂದಿತ್ತು. ಈ ಆರೋಪಗಳ ಬಗ್ಗೆ ತನಿಖೆ ಮಾಡಿದಾಗ ಸತ್ಯಾಂಶ ಬಯಲಾಗಿದ್ದು, ನ.೮ರಿಂದ ಅಮಾನತು ಮಾಡಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿಯ ಕಾಮಪುರಾಣ ವಿಚಾರವಾಗಿ, ಡಾ. ರತ್ನಾಕರ್‌ನನ್ನು ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಮಹಿಳಾ ಆಂತರಿಕ ದೂರು ಸಮಿತಿಗೆ ಸ್ವೀಕೃತಗೊಂಡಿದ್ದ ದೂರು ಆಧರಿಸಿ ನ.೮ರಂದು ರತ್ನಾಕರ್‌ನನ್ನು ಆರೋಗ್ಯ ಇಲಾಖೆ ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಸಿಬ್ಬಂದಿಗಳು ತನಿಖೆಯಲ್ಲಿ ಹಾಜರಾಗಿದ್ದು, ಮಹಿಳಾ ಸಿಬ್ವಂದಿಗಳ ಹೇಳಿಕೆಗಳನ್ನು ತನಿಖಾ ಸಮಿತಿ ಗಂಭೀರವಾಗಿ ಪರಿಗಣಿಸಿತ್ತು. ಲೈಂಗಿಕ ಕಿರುಕುಳ ಅಧಿನಿಯಮ ೨೦೧೩, ಕರ್ನಾಟಕ ನಾಗರಿಕ ಸೇವಾ ನಿಯಮ ೧೯೫೭ರನ್ವಯ ಅಮಾನತು ಮಾಡಲಾಗಿದೆ.