ಆನ್‌ಲೈನ್ ವಂಚಕರಿದ್ದಾರೆ ಎಚ್ಚರಿಕೆ…

546

ಶಿವಮೊಗ್ಗ: ನಮ್ಮಲ್ಲಿ ಎಲ್ಲಿಯ ತನಕ ಮೋಸ ಹೋಗುವ ಜನರಿರುವರೋ ಅಲ್ಲಿಯವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದು ಸಾಮಾನ್ಯವಾದ ಮಾತಾಗಿದೆ. ಕಾಲ ಹಾಗೂ ಸಂದರ್ಭಕ್ಕನುಗುಣವಾಗಿ ಮೋಸ ಮಾಡುವವರು ಹಾಗೂ ಮೋಸ ಹೋಗುವವರು ಬದಲಾಗುತ್ತಿರುತ್ತಾರೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಂತೆ ಮೋಸ ಮಾಡುವುದನ್ನೇ ಖಯಾಲಿ ಮಾಡಿಕೊಂಡ ಕೆಲ ಕಿಡಿಗೇಡಿಗಳು ಮುಗ್ದರನ್ನು ವಂಚಿಸಲು ಹೊಸ ಹೊಸ ಬಗೆಯ ಮಾರ್ಗೋಪಾಯಗಳನ್ನು ಹುಡುಕುತ್ತಿರುತ್ತಾರೆ.
ಈ ಮೊದಲು ಕೆಲ ಕಿಡಿಗೇಡಿಗಳು ಬ್ಯಾಂಕ್‌ನಿಂದ ಕರೆಮಾಡುತ್ತಿರು ವುದಾಗಿ ಹೇಳಿಕೊಂಡು ಎಟಿಎಂ ಪಿನ್ ನಂಬರ್ ಪಡೆದು, ತಮ್ಮ ಮಾತಿನಲ್ಲೇ ಎಲ್ಲರನ್ನೂ ಮರಳು ಮಾಡಿ, ತಮ್ಮ ವಂಚನೆಯ ಬಲೆಗೆ ಕೆಡವಿಕೊಳ್ಳು ತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಕೆಲವರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದು, ಜ್ಯೋತಿಷ್ಯ ಪರಿಹಾರ/ ವಾಸ್ತು ಸಲಹೆ/ ಉಚಿತ ಫೈನಾನ್ಸ್ ಸೌಲಭ್ಯ, ಚಿತ್ರ/ದಾರಾವಹಿಯಲ್ಲಿ ನಟಿಸಲು ಕಲಾವಿದರು ಬೇಕು/ ಮನೆಯಲ್ಲೇ ಕುಳಿತು ಕೈತುಂಬಾ ಸಂಪಾದಿಸಿ ಹೀಗೆ ಹತ್ತು ಹಲವು ಶಿರೋನಾಮೆಯ ಜಾಹೀರಾತು ನೀಡಿ, ಗೂಗಲ್ ಪೇ, ಫೋನ್ ಪೇ, ಆನ್‌ಲೈನ್ ಮೂಲಕ ಹಣ ಪಡೆದು ವಂಚಿಸುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಈ ಕುರಿತು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುವ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಅವರು, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರ ಹೆಚ್ಚಾಗುತ್ತಿದೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ಕೆಲವು ಕಿಡಿಗೇಡಿಗಳು ಜನರಿಗೆ ಬಣ್ಣ ಬಣ್ಣದ ಟೋಪಿ ಹಾಕುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಈ ರೀತಿಯ ಜಾಹೀರಾತಿನ ಕುರಿತು ಹಣಕಾಸು ವ್ಯವಹಾರ ಮಾಡುವ ಮುನ್ನ ಸಂಬಂಧಪಟ್ಟ ವ್ಯಕ್ತಿ ಅಥವಾ ಸಂಸ್ಥೆ/ ಸಂಸ್ಥೆಯ ಪ್ರತಿನಿಧಿಗೆ ಖುದ್ದಾಗಿ ಭೇಟಿ ಮಾಡಿ, ಸದರಿ ವ್ಯವಹಾರದ ಕುರಿತು ಖಚಿತತೆಯನ್ನು ಪರಿಶೀಲಿಸಿ ಅವುಗಳು ಸತ್ಯವೆಂದು ದೃಢಪಟ್ಟ ನಂತರವೇ ಅಂತಹ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ವ್ಯವಹರಿಸಬೇಕಾಗಿ ಕೋರಿದ್ದಾರೆ.