ಅ.೫: ರಾಮ ಮಂದಿರ ನಿರ್ಮಾಣ ಪೂಜಾವಿಧಿ

460

ಶಿವಮೊಗ್ಗ: ಅಯೋಧ್ಯೆಯಲ್ಲಿ ಆ.೫ ರಂದು ಶ್ರೀರಾಮ ಮಂದಿರ ನಿರ್ಮಾಣದ ಆರಂಭದ ಪೂಜೆ ನಡೆಯಲಿದ್ದು, ಅಂದು ಶಿವಮೊಗ್ಗ ದಲ್ಲಿಯೂ ಕೂಡ ಸಂಭ್ರಮದ ಕಾರ್ಯಕ್ರಮಕ್ಕೆ ಸಿದ್ದತೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾಧವ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಶ್ರೀರಾಮ ಮಂದಿರ ನಿರ್ಮಾಣದ ಕನಸು ಶತಮಾನಗಳ ಹೋರಾಟ ವಾಗಿದೆ. ಸಾವಿರಾರು ಸಾಧುಸಂತರ ಬೇಡಿಕೆಯಾಗಿತ್ತು. ಇದು ಈಗ ನನಸಾಗುವ ಕಾಲ ಬಂದಿದೆ. ಮಂದಿರದ ನಿರ್ಮಾಣಕ್ಕೆ ಮುಹೂರ್ತ ನಿಶ್ಚಯಿಸಲಾಗಿದೆ. ಆ.೫ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರಮೋದಿಯವರು ಆರಂಭದ ಪೂಜೆ ನಡೆಸುತ್ತಿದ್ದಾರೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ರಾಮಭಕ್ತರು ಅಯೋಧ್ಯೆಗೆ ಹೋಗಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ವಿಲ್ಲದಾಗಿದೆ. ಹಾಗಾಗಿ ವಿಶ್ವಹಿಂದು ಪರಿಷತ್‌ನ ಕೇಂದ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಮಿಲಿಂದ ಪಾರಂಡೆಯವರು ತಮ್ಮ ತಮ್ಮ ಮನೆಗಳಲ್ಲಿ ಅಥವಾ ಅವಕಾಶವಿರುವ ಮಠ ಮಂದಿರಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಸರಳವಾಗಿ ಸಂಭ್ರಮದಿಂದ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಬೇಕು ಎಂದರು.
ಈ ನಿಮಿತ್ತ ಆ.೫ ರಂದು ನಗರದ ಕೋಟೆ ಶ್ರೀ ಸೀತಾರಾಮಾಂಜ ನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ೮ ಗಂಟೆಗೆ ಶ್ರೀ ರಾಮತಾರಕ ಹೋಮ ನಡೆಸಲಾಗು ವುದು, ಬೆ.೧೦ ಗಂಟೆಗೆ ಸಣ್ಣ ಸಭಾ ಕಾರ್ಯಕ್ರಮ ಇರುತ್ತದೆ. ಹಾಗೆಯೇ ರಾಮಭಕ್ತರು ತಮ್ಮ ತಮ್ಮ ಬೀದಿ, ಮನೆ, ಗ್ರಾಮ, ದೇವಾಲಯಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ ಭಜನೆ, ಸಂಕೀರ್ತನೆ, ಜಪ, ಪೂಜೆ, ಪುಷ್ಪಾರ್ಚನೆ, ದೂಪ, ದೀಪ, ನೈವೇದ್ಯಗಳಿಂದ ಶ್ರೀರಾಮನನ್ನು ಆರಾಧಿಸಲಿದ್ದಾರೆ ಎಂದರು.
ಅಂದು ಬೆಳಿಗ್ಗೆ ೧೦.೩೦ಕ್ಕೆ ದೂರದರ್ಶನಗಳಲ್ಲಿ ನೇರ ಪ್ರಸಾರ ಇರುತ್ತದೆ. ಎಲ್ಲರೂ ಇದನ್ನು ವೀಕ್ಷಣೆ ಮಾಡುವಂತೆ ಕೋರಿದರು. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪರದೆಯನ್ನಿಟ್ಟು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ. ಕೊರೋನಾ ಸುರಕ್ಷತೆ ಕುರಿತ ನಿಯಮ ಪಾಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದು ಪರಿಷತ್‌ನ ಪದಾಧಿಕಾರಿಗಳಾದ ಚಂದ್ರಕಾಂತ್, ಎಸ್.ಆರ್. ನಟರಾಜ್, ನಾರಾಯಣ ಜಿ. ವರ್ಣೇಕರ್, ಸತೀಶ್, ರಾಜೇಶ ಗೌಡ, ವಿ.ಕೆ.ಜೈನ್ ಇನ್ನಿತರರಿದ್ದರು.