ಅಯೋಧ್ಯ ತೀರ್ಪು ಮಥುರೆಯಲ್ಲಿ ಶ್ರೀಕಷ್ಞ ಮಂದಿರ ನಿರ್ಮಾಣಕ್ಕೆ ಸ್ಪೂರ್ತಿಯಾಗಿದೆ: ಸಚಿವ ಈಶ್ವರಪ್ಪ

488

ಶಿವಮೊಗ್ಗ : ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಷೇಶ ನ್ಯಾಯಾಲಯ ೩೨ ಜನರನ್ನ ಖುಲಾಸೆಗೊಳಿಸಿ ನೀಡಿದ ತೀರ್ಪು ಮಥುರೆಯಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಪೂರ್ತಿಯಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯಾವುದೋ ದೇಶದಿಂದ ಬಂದ ಬಾಬರ್, ಮಂದಿರ ಕೆಡವಿ ಮಸೀದಿ ನಿರ್ಮಾಣವಾದಾಗ ಗುಲಾಮರ ಸಂಕೇತದಂತೆ ನಮ್ಮನ್ನ ಕೆಣಕುತ್ತಿತ್ತು. ಆದರೆ ಈ ತೀರ್ಪು ನೀನು ಗುಲಾಮ ನಲ್ಲವೆಂದು ನೀಡಿದೆ ಎಂದರು.
ಬಾಬ್ರಿ ಮಸೀದಿ ಪ್ರಕರಣದ ಹೋರಾಟದಲ್ಲಿದ್ದ ೩೨ ಜನರಿಗೆ ಕೋರ್ಟ್ ಖುಲಾಸೆ ಮಾಡಿರುವುದು ರಾಷ್ಟ್ರೀಯವಾದಿಗಳಿಗೆ ಸಂತಸದ ದಿನವಾಗಿದೆ. ಸ್ವತಂತ್ರ ಭಾರತದಲ್ಲಿ ನಮ್ಮ ಶ್ರದ್ಧಾ ಮಂದಿರಗಳ ಪರ ಹೋರಾಟ ಮಾಡಲು ಇಂದಿನ ತೀರ್ಪು ಸ್ಪೂರ್ತಿದಾಯಕವಾಗಿದೆ.
ಈ ಮಸೀದಿ ಕೆಡವಿ ರಾಮ ಮಂದಿರ ಕಟ್ಟಬೇಕು ಎಂಬುದು ರಾಷ್ಟ್ರೀಯವಾದಿಗಳ ತೀರ್ಮಾನವಾ ಗಿತ್ತು. ಈ ತೀರ್ಪು ಕೇವಲ ಅಯೋಧ್ಯೆಗೆ ಮಾತ್ರ ಸೀಮಿತವಾಗಿಲ್ಲ. ಮಥುರಾದಲ್ಲಿಯೂ ಶ್ರೀಕೃಷ್ಣನ ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ. ಇಲ್ಲಿಯೂ ಶ್ರೀಕೃಷ್ಣನ ದೇವಾಲಯ ನಿರ್ಮಾಣಕ್ಕೆ ಈ ತೀರ್ಪು ಪ್ರೇರಣೆಯಾಗಿದೆ.ಅಡ್ವಾಣಿ ಅವರಿಗೆ ಶಿಕ್ಷೆಯಾಗಿದ್ದರೆ ಈ ವಯಸ್ಸಿನಲ್ಲಿ ಏನು ಕಥೆ ಎಂದು ಕೆಲವರು ಹೇಳುತ್ತಿದ್ದರು. ಆದರೆ ಅವರು ರಾಮನಿಗಾಗಿ ಶಿಕ್ಷೆಗೆ ಸಿದ್ಧರಾಗಿದ್ದರು ಎಂದರು.
ಮಥುರಾದಲ್ಲಿಯೂ ಕರಸೇವೆ ಮಾಡಲಾಗುವುದಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಮಥುರಾದಲ್ಲಿ ಕರ ಸೇವೆ ಮಾಡಲು ಕೋರ್ಟ್ ಬಿಡುವುದಿಲ್ಲ ಎಂಬ ಭಾವನೆ ನನಗೆ ಇದೆ. ಮಥುರಾದಲ್ಲಿ ಕರಸೇವೆಗೆ ಅವಕಾಶ ನೀಡದೆ ಪೂರ್ಣ ಪ್ರಮಾಣದ ಕೃಷ್ಣ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಮಥುರಾದಲ್ಲಿಯು ಕೃಷ್ಣ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಮಥುರಾದಲ್ಲಿಯೂ ಕರಸೇವೆ ಮಾಡುವ ಅನಿವಾರ್ಯತೆ ಒದಗಿಬರುವ ಸಂಭವನೀಯತೆ ಇದೆ ಎಂದರು.