ಅಮೃತ್ ಯೋಜನೆ : ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ

467

ಶಿವಮೊಗ್ಗ: ಪಾಲಿಕೆ ವ್ಯಾಪ್ತಿಯ ಅಮೃತ್ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ತುಂಬಾ ವಿಳಂಬವಾಗುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಹೆಚ್.ಸಿ. ಯೋಗೀಶ್ ತಿಳಿಸಿದ್ದಾರೆ.
ಅವರು ಇಂದು ಅಮೃತ್ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರದೇಶವಾದ ಜೆ.ಪಿ.ನಗರ, ಟಿಪ್ಪುನಗರ, ಶ್ರೀರಾಮನಗರ, ಶಾಂತಮ್ಮ ಲೇಔಟ್, ಹೊಸಮನೆ, ದ್ರೌಪದಮ್ಮ ಸರ್ಕಲ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿ ನಂತರ ಮಾಧ್ಯಮದವರ ಜೊತೆ ಮಾತನಾಡಿದರು.
ಸರ್ಕಾರ ಮಹಾನಗರಪಾಲಿಕೆ ವ್ಯಾಪ್ತಿಗೆ ಅಮೃತ್ ಯೋಜನೆಯಡಿ ಯಲ್ಲಿ ಸುಮಾರು ೬೮ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ೧೬ ಪ್ಯಾಕೇಜ್‌ಗಳಿವೆ. ವಿವಿಧ ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿ ದ್ದಾರೆ. ಆದರೆ ಯಾರೂ ಕೂಡ ಕೆಲಸ ಪೂರೈಸಿಲ್ಲ. ಕೇವಲ ಶೇ.೩೦ರಷ್ಟು ಮಾತ್ರ ಕೆಲಸವಾಗಿದೆ. ಅತ್ಯಂತ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ನಗರದಲ್ಲಿ ಸ್ವಲ್ಪ ಮಳೆ ಬಂದರೂ ಇಡೀ ಮನೆಗಳಿಗೆ ನೀರು ನುಗ್ಗುತ್ತದೆ. ಈ ಯೋಜನೆ ಅಡಿಯಲ್ಲಿ ನೀರು ಹರಿಯುವ ಕಾಲುವೆಗಳ ದುರಸ್ತಿ ಮತ್ತು ನಿರ್ಮಾಣವೇ ಹೆಚ್ಚಾಗಿ ನಡೆಯುತ್ತಿದ್ದು, ಸಕಾಲದಲ್ಲಿ ಕೆಲಸ ಮುಗಿಯದ ಕಾರಣ ಜನರು ಸಂಕಷ್ಟಕ್ಕೆ ತುತ್ತಾಗಬೇಕಾದ ಸಂಕಷ್ಟ ಸ್ಥಿತಿ ಒದಗಿಬಂದಿದೆ ಎಂದರು.
ಮಾರ್ಚ್ ಅಂತ್ಯದೊಳಗೆ ಕೆಲಸಗಳು ಮುಗಿಯಬೇಕಿತ್ತು. ಆದರೆ ಕೊರೋನಾದ ನೆಪಹೇಳಿ ಮತ್ತೆರಡು ತಿಂಗಳು ವಿಸ್ತರಣೆಯಾಗಿದ್ದರೂ ಕೂಡ ಇನ್ನು ಕೆಲಸಗಳು ಮುಗಿದಿಲ್ಲ. ಆದ್ದರಿಂದ ಶೀಘ್ರವೇ ಕೆಲಸ ಮುಗಿಸಬೇಕು ಮತ್ತು ಗುತ್ತಿಗೆದಾರರಿಗೆ ಈ ಬಗ್ಗೆ ಎಚ್ಚರಿಕೆ ನೀಡಬೇಕು. ಸಕಾಲದಲ್ಲಿ ಕೆಲಸವಾಗದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಯುಮುನಾ ರಂಗೇಗೌಡ, ರೇಖಾ ರಂಗನಾಥ್, ಮಂಜುಳಾ ಶಿವಣ್ಣ, ಆರ್.ಸಿ.ನಾಯ್ಕ, ಶಮೀರ್‌ಖಾನ್, ಮೆಹಬೂಬ್ ಶರೀಫ್ ಸೇರಿದಂತೆ ಹಲವರಿದ್ದರು.