ಅಗತ್ಯ ಸೇವೆಗಳಿಗೆ ವಿನಾಯಿತಿ : ಸದ್ಭಾವನೆಯ ಸೇವೆಗೆ ಅವಕಾಶ

617

ದಾವಣಗೆರೆ :

ಭಾರತವೂ ಸೇರಿದಂತೆ ವಿಶ್ವದಾದ್ಯಂತ ಮಹಾಮಾರಿಯಾಗಿ ಹಬ್ಬುತ್ತಿರುವ ಕೋವಿಡ್-೧೯ರ ಹರಡುವಿಕೆಯನ್ನು ತಡೆಗಟ್ಟಲು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಪ್ರತ್ಯೇಕತೆಯನ್ನು ಅಳವಡಿಸಿಕೊಳ್ಳುವುದು ಅತಿ ಪ್ರಮಖವಾಗಿದೆ.

ಸಾಂಕ್ರಾಮಿಕ ರೋಗಗಳ ಅಧಿನಿಯಮ ೧೮೯೭ರ ೨ನೇ ಪ್ರಕರಣದ ಅಡಿಯಲ್ಲಿನ ಅಧಿಕಾರಗಳನ್ನು ಚಲಾಯಿಸಿ ವಿಪತ್ತು ನಿರ್ವಹಣಾ ಅಧಿನಿಯಮ, ೨೦೦೫ರ ಸಾಧ್ಯವಾಗಿಸುವ ಉಪ ಬಂಧಗಳೊಡನೆ ಓದಿಕೊಂಡಂತೆ ಸರ್ಕಾರವು ಆದೇಶ ಆಕುಕ/೫೪/ಸಿಜಿಎಂ/೨೦೨೦ ಮಾ.೨೩ರಲ್ಲಿ ನಿರ್ಬಂಧಗಳನ್ನು ವಿಧಿಸಿ ಅಧಿಸೂಚಿಸಿರುತ್ತದೆ. ಅಲ್ಲದೇ ಸರಕುಗಳು ಮತ್ತು ಸೇವೆಗಳನ್ನು ಒದಗಿಸುವ ಅಗತ್ಯ ಸೇವೆಗಳಿಗೆ ವಿನಾಯಿತಿ ಇರತಕ್ಕದ್ದು ಎಂದು ಆದೇಶಿಸಲಾಗಿರುತ್ತದೆ.

ವಿನಾಯಿತಿ ಪಟ್ಟಿಯಲ್ಲಿರುವ ಸೇವೆಗಳೆಂದರೆ ಆಹಾರ, ದಿನಸಿ ಅಂಗಡಿಗಳು, ಹಾಲು, ತರಕಾರಿಗಳು, ದಿನಬಳಕೆ ವಸ್ತುಗಳು, ಹಣ್ಣು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳು, ಪೆಟ್ರೋಲ್ ಬಂಕುಗಳು, ಗ್ಯಾಸ್, ಎಲ್‌ಪಿಜಿ, ತೈಲ ಏಜೆನ್ಸಿಗಳು ಮತ್ತು ಅದಕ್ಕೆ ಸಂಬಂಧಿಸಿದ ಉಗ್ರಾಣಗಳು ಹಾಗೂ ಹಿಟ್ಟಿನ ಗಿರಣಿಗಳು ಇದ್ದು, ಈ ಸೇವೆಗಳನ್ನು ನಿಷೆಧಿಸಿರುವುದಿಲ್ಲ. ಈ ಸೇವೆಯನ್ನು ಸದ್ಭಾವನೆಯಿಂದ ಒದಗಿಸುವವರು ದಿನದ ೨೪ ಗಂಟೆಗಳು ಸಹ ಸೇವೆಯನ್ನು ಒದಗಿಸಬಹುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.